ಹಂಗೇರಿ, ಯುರೋಪ್: ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ World Athletics Championship ನಲ್ಲಿ ಪುರುಷರ 4x400 ಮೀಟರ್ಸ್ ರಿಲೇ ಓಟದಲ್ಲಿ ಭಾರತ ತಂಡ ಐದನೇ ಸ್ಥಾನ ಗಳಿಸಿದೆ. ಭಾರತದ ತಂಡವು ಈ ರಿಲೇ ಓಟವನ್ನು ಪೂರ್ಣಗೊಳಿಸಲು ಎರಡು ನಿಮಿಷ 59.92 ಸೆಕೆಂಡುಗಳ ಸಮಯವನ್ನು ತೆಗೆದುಕೊಂಡಿತು.
ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023 ರಲ್ಲಿ ಭಾರತಕ್ಕೆ ಕೇವಲ ಒಂದು ಪದಕ ಸಿಕ್ಕಿದೆ. ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಭಾರತಕ್ಕೆ ಈ ಚಿನ್ನದ ಪದಕವನ್ನು ತಂದು ಕೊಟ್ಟಿದ್ದಾರೆ. ಈ ಚಾಂಪಿಯನ್‌ಶಿಪ್‌ನ ಕೊನೆಯ ದಿನದಂದು ಪುರುಷರ 4x400 ಮೀಟರ್ಸ್ ರಿಲೇ ಓಟದಲ್ಲಿ ಭಾರತವೂ ಪದಕ ಗೆಲ್ಲುವುದನ್ನು ನಿರೀಕ್ಷಿಸಲಾಗಿತ್ತು. ಆದರೆ, ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ನೀಡಿದರೂ ಪದಕ ಗಳಿಸಲು ಸಾಧ್ಯವಾಗಲಿಲ್ಲ. ಪುರುಷರ 4x400 ಮೀ ರಿಲೇ ಓಟದಲ್ಲಿ ಮುಹಮ್ಮದ್ ಅನಸ್ ಯಾಹಿಯಾ, ಅಮೋಜ್ ಜಾಕೋಬ್, ಮುಹಮ್ಮದ್ ಅಜ್ಮಲ್ ವರಿಯಾತೋಡಿ ಮತ್ತು ರಾಜೇಶ್ ರಮೇಶ್ ಅವರ ಕ್ವಾರ್ಟೆಟ್ ಐದನೇ ಸ್ಥಾನ ಗಳಿಸಿತು.
ಭಾರತದ ಪುರುಷರ ತಂಡವು ಓಟವನ್ನು ಪೂರ್ಣಗೊಳಿಸಲು ಎರಡು ನಿಮಿಷ 59.92 ಸೆಕೆಂಡುಗಳನ್ನು ತೆಗೆದುಕೊಂಡಿತು. ಅಮೆರಿಕ ವಿಶ್ವ ದಾಖಲೆಯನ್ನು (2 ನಿಮಿಷ 57.31 ಸೆಕೆಂಡುಗಳು) ಮಾಡಿತು ಮತ್ತು ಈ ಸ್ಪರ್ಧೆಯ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಫ್ರೆಂಚ್ ತಂಡವು ಬೆಳ್ಳಿ ಪದಕ (2 ನಿಮಿಷ 58.45 ಸೆಕೆಂಡುಗಳು) ಪಡೆದ್ರೆ, ಗ್ರೇಟ್ ಬ್ರಿಟನ್ ಕಂಚಿನ ಪದಕಕ್ಕೆ (2 ನಿಮಿಷ 58.71 ಸೆಕೆಂಡುಗಳು) ತೃಪ್ತಿಗೊಂಡಿತು. ಜಮೈಕಾದ ಪುರುಷರ 4x400 ಮೀ ರಿಲೇ ಓಟವು ನಾಲ್ಕನೇ ಸ್ಥಾನ ಗಳಿಸಿತು.
ಪುರುಷರ 4x400 ಮೀಟರ್ಸ್ ರಿಲೇ ಓಟದ ಅರ್ಹತಾ ಸುತ್ತಿನಲ್ಲಿ ಭಾರತದ ಆಟಗಾರರು ಮಿಂಚಿದ್ದರು. ಈ ಕೂಟದಲ್ಲಿ ಭಾರತ ಪುರುಷರ ತಂಡ ಇತಿಹಾಸ ಸೃಷ್ಟಿಸಿ ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಈ ವೇಳೆ, ಭಾರತ ತಂಡ 4x400 ಮೀಟರ್ಸ್ ರಿಲೇ ಓಟದಲ್ಲಿ ಎರಡು ನಿಮಿಷ 59.05 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಏಷ್ಯನ್ ದಾಖಲೆಯನ್ನು ಮುರಿದಿತ್ತು. ಹಿಂದಿನ ದಾಖಲೆ ಜಪಾನ್ ಆಟಗಾರರ ಹೆಸರಲ್ಲಿತ್ತು (2 ನಿಮಿಷ 59.51 ಸೆಕೆಂಡ್).
ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಪಾರುಲ್: ಮತ್ತೊಂದೆಡೆ ಪಾರುಲ್ ಚೌಧರಿ ಮಹಿಳೆಯರ 3000 ಮೀಟರ್ಸ್ ಸ್ಟೀಪಲ್‌ಚೇಸ್‌ನ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಈ ಟೂರ್ನಿಯ ಫೈನಲ್‌ನಲ್ಲಿ ಪಾರುಲ್ ಚೌಧರಿ 11ನೇ ಸ್ಥಾನ ಪಡೆದರು. ಪಾರುಲ್ ಓಟವನ್ನು ಪೂರ್ಣಗೊಳಿಸಲು 9 ನಿಮಿಷ 15.31 ಸೆಕೆಂಡುಗಳನ್ನು ತೆಗೆದುಕೊಂಡರು, ಇದು ರಾಷ್ಟ್ರೀಯ ದಾಖಲೆಯಾಗಿದೆ. ಇದರೊಂದಿಗೆ, ಪಾರುಲ್ ಖಂಡಿತವಾಗಿಯೂ ಪ್ಯಾರಿಸ್ ಒಲಿಂಪಿಕ್ಸ್ 2024 ಗೆ ಅರ್ಹತೆ ಪಡೆಯಲು ಸಾಧ್ಯವಾಗಿದೆ.