ನವದೆಹಲಿ: ಟೋಕಿಯೊದಲ್ಲಿ ಕೊನೆಯ ವಾರ ಭಾರತದಲ್ಲಿ ಹೆಚ್ಚು ಜನರಿಗೆ ತಿಳಿಯದ ಗಾಲ್ಫ್ ಕ್ರೀಡೆಯಲ್ಲಿ ಅದ್ಭುತ ಪ್ರದರ್ಶನ ತೋರಿ ದೇಶದೆಲ್ಲೆಡೆ ಚರ್ಚೆಗೀಡಾಗಿದ್ದ ಬೆಂಗಳೂರಿನ ಹುಡುಗಿ ಅದಿತಿ ಅಶೋಕ್ ತಮ್ಮ ಒಲಿಂಪಿಕ್ಸ್ ಅನುಭವವನ್ನು ಹಂಚಿಕೊಂಡಿದ್ದಾರೆ. ಟೋಕಿಯೊದಲ್ಲಿ ತಮ್ಮ ಹೋರಾಟ ಫ್ಲೈವೇಟ್ ಬಾಕ್ಸರ್ ರಿಂಗ್ನಲ್ಲಿ ಹೆವಿ ವೇಟ್ ಬಾಕ್ಸರ್ ಜೊತೆಗೆ ಕಾದಾಡಿದಂತಿತ್ತು ಎಂದು ತಿಳಿಸಿದ್ದಾರೆ.
ಅದಿತಿ ಗಾಲ್ಫ್ನಲ್ಲಿ ವಿಶ್ವದ 200ನೇ ಶ್ರೇಯಾಂಕ ಪಡೆದಿದ್ದರು. ಆದರೆ ಆಕೆಯ ಒಲಿಂಪಿಕ್ಸ್ ಪ್ರದರ್ಶನ ವಿಶ್ವವನ್ನೇ ಬೆಕ್ಕಸ ಬೆರಗಾಗಿಸಿತ್ತು. ಕೊನೆಯ ಒಂದೆರಡು ಶಾಟ್ ಹೊರತುಪಡಿಸಿದರೆ, ನಾಲ್ಕೂ ದಿನಗಳಲ್ಲೂ ಪ್ರಾಬಲ್ಯ ಸಾಧಿಸಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ದುರಾದೃಷ್ಟವಶಾತ್ ಕೊನೆಯ 2-3 ಶಾಟ್ಗಳಲ್ಲಿ ಹಿನ್ನಡೆ ಅನುಭವಿಸಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಐತಿಹಾಸಿಕ ಪದಕದಿಂದ ವಂಚಿತರಾಗಿದ್ದರು.
ತಾವೆದುರಿಸಿದ ಸ್ಪರ್ಧೆಯನ್ನು ತಮ್ಮದೇ ದಾಟಿಯಲ್ಲಿ ಅದಿತಿ ಈ ರೀತಿ ವಿವರಿಸಿದ್ದಾರೆ. " ಹೆವಿ ವೇಟ್ ಬಾಕ್ಸರ್ಗಳ ಸುತ್ತ ತಾನೊಬ್ಬಳು ಮಾತ್ರ ಫ್ಲೈ ವೇಟ್ ಬಾಕ್ಸರ್ ಆಗಿ ಪೈಪೋಟಿಯಲ್ಲಿದ್ದೆ. ಅಥವಾ ಸಣ್ಣ ಬಿಬಿ ಗನ್ ನೊಂದಿಗೆ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಂತೆ ಒಲಿಂಪಿಕ್ಸ್ನಲ್ಲಿ ನನ್ನ ಸ್ಥಿತಿ ಇತ್ತು" ಎಂದು ದಿಗ್ಗಜ ಗಾಲ್ಫರ್ಗಳ ಜೊತೆಗಿನ ಸೆಣಸಾಟವನ್ನು ವರ್ಣಿಸಿದ್ದಾರೆ.
ಅದಾಗ್ಯೂ ಕನ್ನಡದ ಹುಡುಗಿ 2016ರ ರಿಯೋ ಒಲಿಂಪಿಕ್ಸ್ನಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದರೂ ತಮ್ಮ 2ನೇ ಒಲಿಂಪಿಕ್ಸ್ನಲ್ಲಿ 4ನೇ ಸ್ಥಾನ ಪಡೆಯುವ ಮೂಲಕ ಕೋಟ್ಯಂತರ ಭಾರತೀಯರ ಮನಸ್ಸನ್ನು ಗೆದ್ದಿದ್ದಾರೆ. ಗಾಲ್ಫ್ ಎಂದರೆ ಗೊತ್ತಿಲ್ಲದವರು ಮುಂಜಾನೆ 4:30ಕ್ಕೆ ಎದ್ದು ಅದಿತಿಯ ಆಟವನ್ನು ಕಣ್ತುಂಬಿಕೊಂಡಿದ್ದಾರೆ ಎಂದರೆ ಅವರ ಸಾಧನೆ ಅತಿಶಯೋಕ್ತಿಯಲ್ಲ.
ಗಾಲ್ಫ್ ಸ್ಪರ್ಧೆಯಲ್ಲಿ ಅಮೆರಿಕದ ನೆಲ್ಲಿ ಕೋರ್ಡಾ ಚಿನ್ನದ ಪದಕ, ಜಪಾನ್ನ ಮೋನೆ ಇನಾಮಿ ಬೆಳ್ಳಿ ಮತ್ತು ನ್ಯೂಜಿಲ್ಯಾಂಡ್ನ ಲಿಡಿಯಾ ಕೊ ಕಂಚಿನ ಪದಕ ಪಡೆದರು.