ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಮಾಜಿ ಹಾಕಿ ಆಟಗಾರ ರಾಜೀವ್ ಮಿಶ್ರಾ ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವನ್ನಪ್ಪಿರುವುದು ಇಡೀ ಕುಟುಂಬಕ್ಕೆ ತೀವ್ರ ಆಘಾತಕ್ಕೆ ತಂದಿದೆ. ರಾಜೀವ್ ಮಿಶ್ರಾ ಅವರ ಪತ್ನಿ ಚಂಚಲ್ ಮಿಶ್ರಾ ಮತ್ತು ಪುತ್ರಿ ಶೌರ್ಯ ಈ ಘಟನೆಯ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಅಂತಾರಾಷ್ಟ್ರೀಯ ಹಾಕಿ ಆಟಗಾರನ ಶವ ಶನಿವಾರ ಅವರ ಕೊಠಡಿಯಲ್ಲಿ ನಿಗೂಢ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ರಾಜೀವ್ ಮಿಶ್ರಾ ವಾರಣಾಸಿಯ ಶಿವಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣಪುರ ಸರ್ಸೌಲಿ ಗ್ರಾಮದ ನಿವಾಸಿ. ಅವರ ಕೊಠಡಿಯಿಂದ ದುರ್ವಾಸನೆ ಬರುತ್ತಿದ್ದಂತೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಮನೆಗೆ ಬಂದು ಕೊಠಡಿಯ ಬಾಗಿಲು ತೆರೆದಾಗ ರಾಜೀವ್ ಮಿಶ್ರಾ ಮೃತದೇಹ ಹಾಸಿಗೆಯ ಬಳಿ ಬಿದ್ದಿತ್ತು. ಅವರು ಮೃತಪಟ್ಟು ಹೆಚ್ಚು ಕಡಿಮೆ ಮೂರು ದಿನ ಆಗಿದ್ದರಿಂದ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿತ್ತು.
ಇದಾದ ನಂತರ ಪೊಲೀಸರು ಲಕ್ನೋದ ಆಲಂಬಾಗ್‌ನಲ್ಲಿ ವಾಸಿಸುತ್ತಿರುವ ರಾಜೀವ್ ಅವರ ಪತ್ನಿ ಚಂಚಲ್ ಮಿಶ್ರಾ ಅವರಿಗೆ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ಅವರ ಪತ್ನಿ ಚಂಚಲ್ ಮಿಶ್ರಾ ಮತ್ತು ಮಗಳು ಶೌರ್ಯ ವಾರಣಾಸಿಗೆ ದೌಡಾಯಿಸಿದ್ದರು.
ರಾಜೀವ್ ಮಿಶ್ರಾ ಅವರು 1997 ರಲ್ಲಿ ಜೂನಿಯರ್ ಹಾಕಿ ವಿಶ್ವಕಪ್ ಆಡಿದ್ದರು. ಈ ವೇಳ ಅವರ ಕಾಲಿಗೆ ಪೆಟ್ಟಾಗಿತ್ತು. ಸರ್ಕಾರದಿಂದ ಆಗ ಸಹಾಯವನ್ನೂ ಕೇಳಿದ್ದರು, ಆದರೆ, ಸರ್ಕಾರ ಸ್ಪಂದಿಸಿರಲಿಲ್ಲ. ಕೆಲ ಸಮಯದ ನಂತರ ಅವರಿಗೆ ರೈಲ್ವೆಯಲ್ಲಿ ಉದ್ಯೋಗ ಸಿಕ್ಕಿತ್ತು. ವಾರಣಾಸಿ ಕ್ಯಾಂಟ್ ರೈಲು ನಿಲ್ದಾಣದಲ್ಲಿ ಸಿಐಟಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಟದಲ್ಲಿ ಅವಕಾಶ ಸಿಗುತ್ತಿಲ್ಲ ಎಂದು ಖಿನ್ನತೆಗೆ ಒಳಗಾಗಿ ಕುಡಿತದ ಚಟಕ್ಕೆ ದಾಸರಾಗಿದ್ದರು. ಆದರೆ ತಂದೆ ಆತ್ಮಹತ್ಯೆ ಮಾಡಿಕೊಳ್ಳುವಂತಹವರಲ್ಲ ಎಂದು ರಾಜೀವ್ ಮಿಶ್ರಾ ಅವರ ಪುತ್ರಿ ಶೌರ್ಯ ಹೇಳಿದ್ದಾರೆ.
ಸ್ಥಳೀಯ ಜನರ ಪ್ರಕಾರ, 46 ವರ್ಷದ ರಾಜೀವ್ ಮಿಶ್ರಾ ರೈಲ್ವೇಸ್‌ನಲ್ಲಿ ಟಿಟಿ ಆಗಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳಿಂದ ಅವರು ಅಸ್ವಸ್ಥರಾಗಿ ನಡೆದಾಡುತ್ತಿದ್ದರು. ಅವರ ಮಡದಿ ಮತ್ತು ಮಕ್ಕಳು ಲಖನೌನಲ್ಲಿ ಕೆಲಸದಲ್ಲಿದ್ದರು. ಮಿಶ್ರಾ ಅವರ ಮನೆಯಿಂದ ಕೊಳೆತ ವಾಸನೆ ಬಂದಿರುವುದನ್ನು ಗಮಿನಿಸಿದ ಸ್ಥಳೀಯರು, ಲಖನೌನಲ್ಲಿದ್ದ ಕುಟುಂಬಸ್ಥರಿಗೆ ಕರೆ ಮಾಡಿದ್ದರು. ಬಾಗಿಲು ಒಡೆದು ನೋಡುವಂತೆ ಮನೆಯವರು ಹೇಳಿದ್ದಕ್ಕೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ವಾರಣಾಸಿಯ ಹೆಚ್ಚುವರಿ ಆಯುಕ್ತ ಸಂತೋಷ್ ಸಿಂಗ್ ಈ ಕುರಿತು ಮಾತನಾಡಿ, ರಾಜೀವ್ ಮಿಶ್ರಾ ಅವರು ರಾಷ್ಟ್ರ ಮಟ್ಟದ ಹಾಕಿ ಆಟಗಾರರಾಗಿದ್ದರು. ಪ್ರಸ್ತುತ ರೈಲ್ವೇಯಲ್ಲಿ ಟಿಟಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಕುಡಿತದ ಕಾರಣ ಸಾವನ್ನಪ್ಪಿದ್ದಾರೆ. ಕೊಲೆ ಮತ್ತು ಆತ್ಮಹತ್ಯೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಮನೆಯ ಬಾಗಿಲನ್ನು ಒಳಗಿನಿಂದ ಲಾಕ್ ಹಾಕಲಾಗಿತ್ತು. ದೇಹ ಕೊಳೆತಿದ್ದರಿಂದ ಸುತ್ತ ರಕ್ತದ ರೀತಿಯ ನೀರು ಹರಡಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಸಹಜ ಸಾವು ಎಂಬಂತೆ ಬಂದಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಆಸ್ತಿ ವಿಚಾರವಾಗಿ ಕೌಟುಂಬಿಕ ಕಲಹ: ಪತ್ನಿಯ ಬೆನ್ನತ್ತಿ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ ಪತಿ!