ಫುಕುಶಿಮಾ: ಕೊರೊನಾದಿಂದ ಮುಂದೂಡಲ್ಪಟ್ಟಿರುವ ಹಾಗೂ ಈ ವರ್ಷ ಜುಲೈನಲ್ಲಿ ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್‌ನ ಕ್ರೀಡಾ ಜ್ಯೋತಿಯ ರಿಲೇ ಇಂದಿನಿಂದ ಟೋಕಿಯೋದ ಫುಕುಶಿಮಾದಿಂದ ಆರಂಭವಾಗಿದೆ. ಇದು 121 ದಿನಗಳ ಕಾಲ ಜಪಾನ್ನಾದ್ಯಂತ ಪಯಣಿಸಲಿದ್ದು, ಜುಲೈ 23ರಂದು ಒಲಿಂಪಿಕ್ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಲಿದೆ.
ಸುಮಾರು 1800 ಜನರ ಸಾವಿಗೆ ಕಾರಣವಾಗಿದ್ದ 2011ರ ಭೂಕಂಪ, ಸುನಾಮಿ ಮತ್ತು ಮೂರು ಪರಮಾಣು ಅಣುಕೇಂದ್ರ ಕರಗುವಿಕೆಯಿಂದ ಧ್ವಂಸಗೊಂಡಿರುವ ಪ್ರದೇಶವಾದ ಈಶಾನ್ಯ ಫುಕುಶಿಮಾ ಪ್ರಾಂತ್ಯದಲ್ಲಿ ಒಲಿಂಪಿಕ್ ರಿಲೇ ಗುರುವಾರ ಪ್ರಾರಂಭವಾಗಿದೆ.
ಇದನ್ನು ಓದಿ:ಎಕ್ಸ್ಕ್ಲ್ಯೂಸಿವ್.. ಒಲಿಂಪಿಕ್ಸ್ಗೆ ಅರ್ಹತೆ ಪಡೆದಿರುವುದು ನನ್ನ ಜವಾಬ್ದಾರಿ ಹೆಚ್ಚಿಸಿದೆ : ಬಾಕ್ಸರ್ ಪಂಗಲ್
2011 ಮಹಿಳಾ ಫುಟ್ಬಾಲ್ ವಿಶ್ವಕಪ್ ಗೆದ್ದ ತಂಡದ ಪ್ರಮುಖ ಆಟಗಾರ್ತಿಯಾಗಿದ್ದ ಅಜುಸಾ ಇವಾಶಿಮಿಜು, ಜ್ಯೋತಿಯು ಜೊತೆಗೆ ಮೊದಲ ರನ್ನರ್ ಆಗಿ ಪ್ರಯಾಣ ಆರಂಭಿಸಿದ್ದಾರೆ. ಈ ಪಯಣದಲ್ಲಿ ಸುಮಾರು 10,000ಕ್ಕೂ ಹೆಚ್ಚು ಓಟಗಾರರು ಜಪಾನ್‌ನ ಉದ್ದಕ್ಕೂ ಸುಮಾರು 47 ಪ್ರಾಂತ್ಯಗಳು ಮತ್ತು ದ್ವೀಪಗಳಲ್ಲಿ ಕ್ರೀಡಾ ಜ್ಯೋತಿ ಹಿಡಿದು ಓಡಲಿದ್ದಾರೆ. ಕೈಯಿಂದ ಕೈಗೆ ಜ್ಯೋತಿ ಸಾಗಿಸಿ ಪ್ರತಿಷ್ಠಿತ ಒಲಿಂಪಿಕ್ಸ್‌ನ ಸಾಂಪ್ರದಾಯ, ಧ್ಯೇಯವನ್ನು ಸಾರಿ ಹೇಳಲಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ಕಾರಣದಿಂದ ಸಾರ್ವಜನಿಕರಿಗೆ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿರಲಿಲ್ಲ. ಆದರೆ ಕಾರ್ಯಕ್ರಮದ ಲೈವ್ ಪ್ರಸಾರವಾಗಿತ್ತು.