ಟೋಕಿಯೋ : ಒಲಿಂಪಿಕ್ಸ್ ಮೇಲೆ ಕೊರೊನಾ ಕರಿನೆರಳು ಆವರಿಸಿದೆ. ಕಳೆದ ಮೂರು ದಿನಗಳಿಂದ 5 ಅಥ್ಲೀಟ್ಗಳಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಈ ಬಾರಿ ಕ್ರೀಡಾಕೂಟ ನಡೆಯುವುದೋ ಇಲ್ಲವೋ ಎಂಬ ಅನುಮಾನ ಮೂಡುತ್ತಿರುವಾಗಲೇ ಟೋಕಿಯೋ 2020 ಮುಖ್ಯಸ್ಥ ತೋಶಿರೊ ಮುಟೋ ಜಾಗತಿಕ ಕ್ರೀಡಾಕೂಟವನ್ನು ಕೊನೆಯ ನಿಮಿಷದಲ್ಲಿ ರದ್ದುಪಡಿಸುವುದನ್ನು ತಳ್ಳಿ ಹಾಕುವಂತಿಲ್ಲ ಎಂದು ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ.
ಜುಲೈ 23 ಶುಕ್ರವಾರದಿಂದ ಕ್ರೀಡಾಕೂಟ ಆರಂಭವಾಗಲಿದೆ. ಕೋವಿಡ್ ಸೋಂಕಿತರ ಸಂಖ್ಯೆ ಏರುಗತಿಯಾಗುತ್ತಿರುವುದರಿಂದ ಮತ್ತೊಮ್ಮೆ ಟೂರ್ನಿಯನ್ನು ರದ್ದುಗೊಳಿಸಬಹುದೇ ಎಂದು ಸುದ್ದಿಗೋಷ್ಠಿಯಲ್ಲಿ ಕೇಳಿದ್ದಕ್ಕೆ ಈಗಲೂ ರದ್ದಾಗುವ ಸಾಧ್ಯತೆಯಿದೆ. ಆದರೆ, ತಾವು ಸೋಂಕಿನ ಸಂಖ್ಯೆಗಳ ಮೇಲೆ ನಿಗಾ ಇಡುವೆ ಹಾಗೂ ಅಗತ್ಯವಿದ್ದರೆ ಸಂಘಟಕರೊಂದಿಗೆ ಚರ್ಚೆ ನಡೆಸುವುದಾಗಿ ಮುಟೊ ತಿಳಿಸಿದ್ದಾರೆ.
"ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾದರೆ ನಾವು ಚರ್ಚೆಗಳನ್ನು ಮುಂದುವರಿಸುತ್ತೇವೆ. ಕೊರೊನಾ ವೈರಸ್ ಪರಿಸ್ಥಿತಿಯ ಆಧಾರದ ಮೇಲೆ ನಾವು ಮತ್ತೊಮ್ಮೆ ಐದು ಪಕ್ಷಗಳ ಮಾತುಕತೆ ನಡೆಸಲು ನಾವು ಒಪ್ಪಿಗೆ ಸೂಚಿಸಿದ್ದೇವೆ. ಈ ಸಮಯದಲ್ಲಿ, ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. ಆದ್ದರಿಂದ ಪರಿಸ್ಥಿತಿ ಬಂದ ಸಂದರ್ಭದಲ್ಲಿ ಏನು ಮಾಡಬೇಕೆಂದು ನಾವು ಯೋಚಿಸುತ್ತೇವೆ '' ಎಂದು ಮುಟೊ ಹೇಳಿದ್ದಾರೆ.
ಸೋಮವಾರದವರೆಗೆ 5 ಅಥ್ಲೀಟ್ಗಳಿಗೆ ಕೋವಿಡ್-19 ಸೋಂಕು ತಗುಲಿರುವುದಾಗಿ ಮತ್ತು ಅದರಲ್ಲಿ ಮೂವರು ಕ್ರೀಡಾಗ್ರಾಮದಲ್ಲಿ ಇದ್ದರೆಂದು ಆಯೋಜಕರು ತಿಳಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಈವರೆಗೆ ಸೋಂಕಿಗೆ ತುತ್ತಾಗಿರುವವರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ.
ಇದನ್ನು ಓದಿ: ಟೋಕಿಯೋದಲ್ಲಿ ಸುರಕ್ಷಿತವಾಗಿ ಒಲಿಂಪಿಕ್ಸ್ ಆಯೋಜಿಸುವುದನ್ನು ಇಡೀ ವಿಶ್ವ ನೋಡಬೇಕು : ಜಪಾನ್ ಪಿಎಂ ಸುಗಾ