ಮುಂಬೈ: 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಟಾಪ್ 10ಕ್ಕೇರಿಸುವುದೇ ನಮ್ಮ ಗುರಿ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಕೇವಲ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದರ ಕಡೆಗೆ ಮಾತ್ರ ನಮ್ಮ ಗುರಿಯಾಗಿರಬಾರದು. ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸುವುದು ಬಹಳ ಮುಖ್ಯ ಎಂದು ಅವರು ಟೆನ್ನಿಸ್ ಆಟಗಾರ್ತಿ ಮುದಿತ್ ದಾನಿ ನಡೆಸಿದ ಇನ್ಸ್ಟಾ ಲೈವ್ನಲ್ಲಿ ತಿಳಿಸಿದ್ದಾರೆ.
ಆದ್ದರಿಂದ 2028ರ ವೇಳೆಗೆ ಭಾರತವನ್ನು ಅಗ್ರ 10 ಒಲಿಂಪಿಕ್ ರಾಷ್ಟ್ರಗಳಲ್ಲಿ ಒಂದು ದೇಶವನ್ನಾಗಿ ಮಾಡುವುದು ನಮ್ಮ ಮುಂದಿರುವ ಯೋಜನೆ. ಇದು ನಾನು ನಿಗದಿಪಡಿಸಿರುವ ಗುರಿ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮತ್ತು ಎಲ್ಲಾ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳೊಂದಿಗೆ ನಾವು ಕೆಲವು ಯೋಜನೆ ಹಾಗೂ ಕಾರ್ಯ ತಂತ್ರಗಳನ್ನು ರೂಪಿಸಿದ್ದೇವೆ ಎಂದು ಅವರು ಹೇಳಿದರು.
ಈಗಾಗಲೇ 2020ರಲ್ಲಿ ಜಪಾನ್ನಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಅನ್ನು ಕೊರೊನಾ ಸಾಂಕ್ರಾಮಿಕ ರೋಗದ ಭೀತಿಯಿಂದ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ. 2024ರ ಒಲಿಂಪಿಕ್ಸ್ ಅನ್ನು ಪ್ಯಾರಿಸ್ ಆಯೋಜಿಸಲಿದೆ. 2028ರ ಆವೃತ್ತಿ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆಯಲಿದೆ.
2024ರ ಒಲಿಂಪಿಕ್ಸ್‌ನಲ್ಲಿ ನಮ್ಮ ಅಥ್ಲೀಟ್ಗಳು ಉತ್ತಮ ಪ್ರದರ್ಶನ ತೋರಲಿದ್ದಾರೆ. ಆದರೆ 2028 ಒಲಿಂಪಿಕ್ಸ್‌ನಲ್ಲಿ ಟಾಪ್ 10ಕ್ಕೇರುವುದು ನಮ್ಮ ಉದ್ದೇಶ ಎಂದು ಸಚಿವ ರಿಜಿಜು ಅಭಿಪ್ರಾಯಪಟ್ಟರು.