ಮ್ಯಾಡ್ರಿಡ್ (ಸ್ಪೇನ್): ಸ್ಪೇನ್ ತಂಡವು ಮೊಟ್ಟ ಮೊದಲ ಬಾರಿಗೆ ಫಿಫಾ ಮಹಿಳಾ ವಿಶ್ವಕಪ್ ಪ್ರಶಸ್ತಿ ಗೆದ್ದ ಖುಷಿಯಲ್ಲಿ (FIFA Women World Cup) ಸ್ಪ್ಯಾನಿಷ್ ಫುಟ್ಬಾಲ್ ಫೆಡರೇಶನ್ ಮುಖ್ಯಸ್ಥ ಲೂಯಿಸ್ ರುಬಿಯಾಲ್ಸ್ ತೋರಿದ ಅತ್ಯುತ್ಸಾಹ ಅವರ ಸ್ಥಾನಕ್ಕೆ ಕುತ್ತು ತಂದಿದೆ. ಪಂದ್ಯ ಗೆದ್ದ ಸಂಭ್ರಮದಲ್ಲಿ ಆಟಗಾರ್ತಿಯರಿಗೆ ಚುಂಬಿಸಿದ ಲೂಯಿಸ್ ನಡೆ ತೀವ್ರ ಟೀಕೆಗೆ ಗುರಿಯಾಗಿತ್ತು. ಇದೀಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮುನ್ನ ಲೂಯಿಸ್ ತಮ್ಮ ಸ್ಥಾನದಿಂದ ಅಮಾನತುಗೊಂಡಿದ್ದರು.
ಆಗಸ್ಟ್ ತಿಂಗಳಿನಲ್ಲಿ ಸಿಡ್ನಿಯಲ್ಲಿ ನಡೆದ ಫೈನಲ್‌ನಲ್ಲಿ ಸ್ಪೇನ್ 1-0 ಗೋಲುಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ ಮೊಟ್ಟ ಮೊದಲ ಬಾರಿಗೆ ಫಿಫಾ ಮಹಿಳಾ ವಿಶ್ವಕಪ್ ಗೆದ್ದುಕೊಂಡಿತ್ತು. ಈ ಸಂದರ್ಭದಲ್ಲಿ ತಂಡದ ಸದಸ್ಯರಿಗೆ ಪದಕ ನೀಡುವಾಗ ಲೂಯಿಸ್ ಆಟಗಾರ್ತಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಪದಕ ಪ್ರಶಸ್ತಿ ಪ್ರಧಾನ ಸಂದರ್ಭದಲ್ಲಿ ಲೂಯಿಸ್, ಸ್ಟಾರ್ ಆಟಗಾರ್ತಿ ಜೆನ್ನಿ ಹೆರ್ಮೊಸೊ ಕೆನ್ನೆಗೆ ಮುತ್ತು ಕೊಟ್ಟಿದ್ದರು. ಅಷ್ಟೇ ಅಲ್ಲ, ಇತರ ಆಟಗಾರ್ತಿಯರಿಗೂ ಮುತ್ತಿಟ್ಟಿದ್ದರು. ಈ ಸಂದರ್ಭದ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಸ್ಪೇನ್ ಹಾಗೂ ವಿಶ್ವದಾದ್ಯಂತ ಪ್ರತಿಭಟನೆ ವ್ಯಕ್ತವಾಗಿತ್ತು.
ಈ ಪ್ರಸಂಗದಿಂದಾಗಿ ಚೊಚ್ಚಲ ಬಾರಿಗೆ ಚಾಂಪಿಯನ್ ಆದ ಖುಷಿ ಸ್ಪೇನ್ ವನಿತೆಯರ ತಂಡದಿಂದ ಮಾಯವಾಗಿತ್ತು. ಆಟಗಾರ್ತಿಯರ ಒಪ್ಪಿಗೆ ಪಡೆದೇ ಚುಂಬಿಸಿದ್ದಾಗಿ ಲೂಯಿಸ್ ಸಮಜಾಯಿಷಿ ನೀಡಿದ್ದರು. ಆದರೆ ಅವರ ಹೇಳಿಕೆಯನ್ನು ಹರ್ಮೊಸೊ ತಳ್ಳಿ ಹಾಕಿದ್ದರು. ನಾನು ಚುಂಬನಕ್ಕೆ ಒಪ್ಪಿಗೆ ನೀಡಿರಲಿಲ್ಲ ಎಂದು ಹೇಳಿದ್ದರು. ಹೀಗಾಗಿ, ಫಿಫಾ ಲೂಯಿಸ್ ಅವರನ್ನು ಅಮಾನತುಗೊಳಿಸಿತ್ತು.
ಭಾನುವಾರ ಮಧ್ಯರಾತ್ರಿ ರುಬಿಯಾಲ್ಸ್ ತಮ್ಮ ರಾಜೀನಾಮೆ ಘೋಷಿಸಿದ್ದಾರೆ. ಫಿಫಾ ವಿಧಿಸಿರುವ ಅಮಾನತು ಆದೇಶ ಹಾಗೂ ನನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳಿಂದಾಗಿ ನಾನು ಈ ಸ್ಥಾನಕ್ಕೆ ಮರಳಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ರಾಜೀನಾಮೆ ಪತ್ರದಲ್ಲಿ ಲೂಯಿಸ್ ಉಲ್ಲೇಖಿಸಿದ್ದಾರೆ. ಲೂಯಿಸ್ 2018ರಲ್ಲಿ ಫೆಡರೇಶನ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಈ ಹುದ್ದೆಯೊಂದಿಗೆ ಅವರು ಯುರೋಪಿಯನ್ ಫುಟ್ಬಾಲ್ ಅಸೋಸಿಯೇಷನ್ಸ್ ಒಕ್ಕೂಟದ (UEFA) ಉಪಾಧ್ಯಕ್ಷ ಸ್ಥಾನವನ್ನೂ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಇಂದಾದರೂ ನಡೆಯುತ್ತಾ ಭಾರತ-ಪಾಕಿಸ್ತಾನ ಪಂದ್ಯ? ಹವಾಮಾನ ವರದಿ ಹೀಗಿದೆ!