ಮೀರತ್ (ಉತ್ತರ ಪ್ರದೇಶ): ‘ಶೂಟರ್ ದಾದಿ’ ಎಂದೇ ಪ್ರಸಿದ್ಧವಾಗಿದ್ದ ಶಾರ್ಪ್‌ಶೂಟರ್ ಚಂದ್ರೋ ತೋಮರ್ ಅಕಾ (89) ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ ಏಪ್ರಿಲ್ 26ರಂದು ಕೋವಿಡ್ ದೃಢಪಟ್ಟ ಹಿನ್ನೆಲೆ ಮೀರತ್ನ ಆಸ್ಪತ್ರೆಗೆ ದಾಖಲಾಗಿದ್ದರು.
ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಶೂಟರ್ ದಾದಿ ಅವರು ಹಿರಿಯ ನಾಗರಿಕರ ವಿಭಾಗದಲ್ಲಿ ಅನೇಕ ಪ್ರಶಸ್ತಿಗಳ ಮುಡಿಗೇರಿಸಿಕೊಂಡಿದ್ದರು. ರಾಷ್ಟ್ರಪತಿಯಿಂದಲೂ ಶಕ್ತಿ ಸಮ್ಮಾನ್ ಪ್ರಶಸ್ತಿ ಪಡೆದಿದ್ದರು. ಇದಲ್ಲದೇ ವಿಶ್ವದ ಅತ್ಯಂತ ಹಿರಿಯ ಶಾರ್ಪ್ ಶೂಟರ್ ಎಂಬ ಹೆಗ್ಗಳಿಕೆ ಪಡೆದಿದ್ದರು.
ಜೊತೆಗೆ ಇವರ ಜೀವನಾಧಾರಿತ ಚಿತ್ರವಾದ 2019ರಲ್ಲಿ ಬಿಡುಗಡೆಯಾಗಿದ್ದ 'ಸ್ಯಾಂಡ್ ಕಿ ಅಂಖ್' ಸಿನಿಮಾದಲ್ಲಿ ನಟಿ ತಾಪ್ಸಿ ಪನ್ನು ಮತ್ತು ಭೂಮಿ ಪೆಡ್ನೇಕರ್ ನಟಿಸಿದ್ದರು. ಅಲ್ಲದೇ ಅಮಿರ್ ಖಾನ್ ನಡೆಸಿಕೊಡುತ್ತಿದ್ದ ‘ಸತ್ಯ ಮೇವ ಜಯತೆ’ ಶೋನಲ್ಲೂ ಭಾಗಿಯಾಗಿದ್ದರು.