ರಿಯಾದ್ (ಸೌದಿ ಅರೇಬಿಯಾ): 2034ರ ವಿಶ್ವಕಪ್ ಆತಿಥ್ಯ ವಹಿಸಲು ಆಸಕ್ತಿ ವ್ಯಕ್ತಪಡಿಸಿ ಸೌದಿ ಅರೇಬಿಯಾ ಫುಟ್ಬಾಲ್ ಫೆಡರೇಷನ್ (ಎಸ್ಎಎಫ್ಎಫ್) ಸೋಮವಾರ ಫಿಫಾಗೆ ಮನವಿ ಪತ್ರ ಸಲ್ಲಿಸಿದೆ. ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಆತಿಥ್ಯ ವಹಿಸಲು ತಾನು ಆಸಕ್ತಿ ಹೊಂದಿರುವುದಾಗಿ ಬುಧವಾರ ಸೌದಿ ಅರೇಬಿಯಾ ಹೇಳಿತ್ತು. ಅದರಂತೆ ಫಿಫಾ ನಿಗದಿಪಡಿಸಿದ ಬಿಡ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಎಸ್ಎಎಫ್ಎಫ್ (SAFF) ಅಧ್ಯಕ್ಷ ಯಾಸಿರ್ ಅಲ್ ಮಿಸೆಹಾಲ್ ಸಹಿ ಮಾಡಿದ ಆತಿಥ್ಯದ ಪತ್ರವನ್ನು ಸೌದಿ ಅರೇಬಿಯಾ ಫಿಫಾಗೆ ನೀಡಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.
2034ರ ಫುಟ್ಬಾಲ್ ವಿಶ್ವಕಪ್ನ ಆತಿಥ್ಯ ವಹಿಸುವ ಸೌದಿ ಅರೇಬಿಯಾದ ನಿರ್ಧಾರ ಐತಿಹಾಸಿಕವಾಗಿದೆ ಮತ್ತು ಇದು ಫುಟ್ಬಾಲ್ ಆಟದ ಬೆಳವಣಿಗೆಯ ಅವಕಾಶಗಳನ್ನು ಬಳಸಿಕೊಳ್ಳುವ ದೇಶದ ಬದ್ಧತೆಯನ್ನು ತೋರಿಸುತ್ತದೆ ಎಂದು ಸ್ಯಾಫ್ ಹೇಳಿದೆ. ಆತಿಥ್ಯದ ಬಿಡ್ ಸಲ್ಲಿಕೆಯು ರಾಷ್ಟ್ರವು ಪ್ರಾರಂಭಿಸುತ್ತಿರುವ ರೋಮಾಂಚಕಾರಿ ಪ್ರಯಾಣದ ಎರಡನೇ ಹೆಜ್ಜೆಯಾಗಿದೆ ಎಂದು ಅಲ್ ಮಿಸೆಹಾಲ್ ಹೇಳಿದರು. ಸೌದಿ ಅರೇಬಿಯಾ 2018 ರಿಂದ ಫುಟ್ಬಾಲ್, ಮೋಟಾರ್ ಸ್ಪೋರ್ಟ್ಸ್, ಟೆನಿಸ್, ಅಶ್ವಾರೋಹಿ, ಎಸ್ಸ್ಪೋರ್ಟ್ಸ್ ಮತ್ತು ಗಾಲ್ಫ್ ಸೇರಿದಂತೆ 50 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ನೆಲೆಯಾಗಿದೆ.
2034 ರ ಬಿಡ್ಡಿಂಗ್ ಪ್ರಕ್ರಿಯೆಯು ಈ ತಿಂಗಳ ಆರಂಭದಲ್ಲಿ ಪ್ರಾರಂಭವಾಗಿದೆ ಮತ್ತು ಔಪಚಾರಿಕ ಬಿಡ್ ಪ್ರಸ್ತಾಪವನ್ನು ಸಲ್ಲಿಸುವ ಆಸಕ್ತಿಯನ್ನು ದೃಢೀಕರಿಸಲು ವಿಶ್ವದ ದೇಶಗಳಿಗೆ ಅಕ್ಟೋಬರ್ 31 ರವರೆಗೆ ಮಾತ್ರ ಅವಕಾಶವಿದೆ. ಸೌದಿ ಅರೇಬಿಯಾ ಹೊರತಾಗಿ ಆಸ್ಟ್ರೇಲಿಯಾ ಮತ್ತು ಇಂಡೋನೇಷ್ಯಾಗಳು ಆತಿಥ್ಯದ ಬಿಡ್ ಸಲ್ಲಿಸುವ ನಿರೀಕ್ಷೆಯಿದೆ.
2022ರ ಫಿಫಾ ವಿಶ್ವಕಪ್ ಫೈನಲ್ನಲ್ಲಿ ಅರ್ಜೆಂಟೀನಾ ತಂಡ ಮೊರಾಕೊವನ್ನು ಮಣಿಸಿ ಕಪ್ ಗೆದ್ದುಕೊಂಡಿತ್ತು. ವರದಿಗಳ ಪ್ರಕಾರ, ಫಿಫಾ ವಿಶ್ವಕಪ್ನ ಅಂತಿಮ ದಿನದಂದು 32 ಮಿಲಿಯನ್ ವೀಕ್ಷಕರು ಜಿಯೋ ಸಿನೆಮಾದಲ್ಲಿ ಪಂದ್ಯಾವಳಿ ವೀಕ್ಷಣೆ ಮಾಡಿದ್ದರು. 1986ರ ಬಳಿಕ ಇದೇ ಮೊದಲ ಬಾರಿಗೆ ಅರ್ಜೆಂಟೀನಾ ಫಿಫಾ ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
2030ರ ವಿಶ್ವಕಪ್ ಫುಟ್ಬಾಲ್ ನಡೆಯುವುದೆಲ್ಲಿ?: ದಕ್ಷಿಣ ಅಮೆರಿಕ, ಆಫ್ರಿಕಾ ಮತ್ತು ಯುರೋಪ್ ಈ ಮೂರು ಖಂಡಗಳಲ್ಲಿ 2030 ರ ವಿಶ್ವಕಪ್ ಪಂದ್ಯಗಳು ನಡೆಯಲಿವೆ ಎಂದು ಫಿಫಾ ಅಕ್ಟೋಬರ್ 5 ರಂದು ಘೋಷಿಸಿದೆ. ಮೊರಾಕೊ, ಪೋರ್ಚುಗಲ್ ಮತ್ತು ಸ್ಪೇನ್ ಜಂಟಿ ಆತಿಥ್ಯ ವಹಿಸಲಿದ್ದು, ಉರುಗ್ವೆ, ಅರ್ಜೆಂಟೀನಾ ಮತ್ತು ಪರಾಗ್ವೆಯಲ್ಲಿ ಪಂದ್ಯಗಳು ನಡೆಯಲಿವೆ. ಹೀಗಾಗಿ ಎಲ್ಲಾ ಆರು ರಾಷ್ಟ್ರಗಳು ಸ್ವಯಂಚಾಲಿತವಾಗಿ 2030ರ ವಿಶ್ವಕಪ್ಗೆ ಅರ್ಹತೆ ಪಡೆಯಲಿವೆ.
ಇದನ್ನೂ ಓದಿ : 128 ವರ್ಷಗಳ ಬಳಿಕ 2028ರ ಒಲಿಂಪಿಕ್ಸ್ಗೆ ಕ್ರಿಕೆಟ್ ಸೇರ್ಪಡೆ: ಅ.15ರಂದು ಅಧಿಕೃತ ಘೋಷಣೆ