ಪಾಟ್ನಾ(ಬಿಹಾರ): ಎಲ್ಲ ಕ್ರೀಡೆಗಳಿಗೆ ಸರ್ಕಾರ ಸೂಕ್ತ ನೆರವು ನೀಡಿದಲ್ಲಿ ಪ್ರತಿಭೆಗಳು ಬೆಳೆಯಲು ಸಾಧ್ಯ. ಬಡ ರಾಜ್ಯವಾದ ಬಿಹಾರದಲ್ಲಿ ರಗ್ಬಿ ಪಟುವೊಬ್ಬ ಅವಕಾಶಗಳಿಲ್ಲದೇ ಚಹಾದ ಅಂಗಡಿ ನಡೆಸುತ್ತಿದ್ದಾರೆ. ಇದರ ಜೊತೆಗೆ ಕ್ರೀಡೆಯಲ್ಲೂ ತೊಡಗಿಸಿಕೊಂಡಿರುವ ಈತ ತರಬೇತುದಾರನಾಗುವ ಬಯಕೆ ಹೊಂದಿದ್ದಾನೆ. ಇನ್ನೂ ವಿಶೇಷ ಎಂದರೆ ತನ್ನ ಚಹಾದ ಅಂಗಡಿಗೆ ರಗ್ಬಿ ಚಾಯ್ ಎಂದು ಹೆಸರಿಟ್ಟಿದ್ದಾನೆ.
ಪಾಟ್ನಾದ ನಿವಾಸಿಯಾದ ಸೌರಭ್ ರಗ್ಬಿಯಲ್ಲಿ ಪಳಗಿದ ಪಟು. ಮೂರು ಬಾರಿ ರಾಷ್ಟ್ರೀಯ ಮಟ್ಟದಲ್ಲಿ ತಂಡವನ್ನು ಪ್ರತಿನಿಧಿಸಿದ್ದಾನೆ. ಇದಾದ ನಂತರ ಸೂಕ್ತ ಅವಕಾಶಗಳು ಸಿಗದೇ ಜೀವನಕ್ಕಾಗಿ ಚಹಾದ ಅಂಗಡಿ ಆರಂಭಿಸಿದ್ದಾನೆ. ಇತ್ತ ಚಹಾದ ಪೆಟ್ಟಿಗೆ ಮತ್ತು ರಗ್ಬಿ ರೆಫ್ರಿ ಕೋರ್ಸ್ ಎರಡನ್ನೂ ಒಟ್ಟಾಗಿ ನಿಭಾಯಿಸುತ್ತಿದ್ದಾರೆ.
ಮೂರು ಸಲ ರಾಷ್ಟ್ರಮಟ್ಟದಲ್ಲಿ ಸ್ಪರ್ಧೆ: ಮೂರು ಬಾರಿ ರಾಷ್ಟ್ರೀಯ ಮಟ್ಟದಲ್ಲಿ ರಗ್ಬಿ ಆಡಿದ್ದೇನೆ. ಬಳಿಕ ಯಾವುದೇ ಕೆಲಸ ಸಿಗದೇ ಜೀವನ ನಡೆಸಲು ಚಹಾದಂಗಡಿ ಹಾಕಿದೆ. 250 ರಿಂದ 300 ಕಪ್ ಚಹಾ ದಿನಂಪ್ರತಿ ಮಾರಾಟವಾಗುತ್ತದೆ. ಇದರಲ್ಲಿ ಬರುವ ಹಣದಲ್ಲಿ ರಗ್ಬಿ ರೆಫ್ರಿ ಕೋರ್ಸ್ ಮಾಡುತ್ತಿದ್ದೇನೆ ಎಂದು ಸೌರಭ್ ತಿಳಿಸಿದರು.
2018ರಲ್ಲಿ ಹೈದರಾಬಾದ್‌ನಲ್ಲಿ 14, ಒಡಿಶಾದಲ್ಲಿ 17 ವರ್ಷದೊಳಗಿನವರ ಮತ್ತು 2022 ರ ಮಾರ್ಚ್‌ನಲ್ಲಿ ಮುಂಬೈನಲ್ಲಿ ರಾಷ್ಟ್ರೀಯ ರಗ್ಬಿ ಆಡಿದ್ದೇನೆ. ಪ್ರಸ್ತುತ ರಗ್ಬಿ ರೆಫ್ರಿ ಕೋರ್ಸ್ ಮಾಡುತ್ತಿದ್ದು, ಮುಂದೆ ಬಿಹಾರದ ಪರವಾಗಿ ಕೋಚ್ ಆಗಿ ಕಾಣಿಸಿಕೊಳ್ಳುವ ಬಯಕೆ ಇದೆ. ಸರ್ಕಾರ ನೆರವು ನೀಡಿದಲ್ಲಿ ಪ್ರತಿಭೆಗಳು ಬೆಳೆಯಲಿವೆ ಎಂದು ಅವರು ಅಭಿಪ್ರಾಯಪಟ್ಟರು.
ತಂದೆ ಬಿಎಸ್‌ಎಫ್‌ನಲ್ಲಿ ಯೋಧ: ಚಹಾದಂಗಡಿ ನಡೆಸುತ್ತಿರುವ ರಗ್ಬಿ ಆಟಗಾರ ಸೌರಭ್ ಅವರ ತಂದೆ ಗಡಿ ಭದ್ರತಾ ಪಡೆ(ಬಿಎಸ್ಎಫ್)ಯಲ್ಲಿ ಯೋಧರಾಗಿದ್ದಾರೆ. ಛತ್ತೀಸ್ಗಢದಲ್ಲಿ ಅವರೀಗ ಕೆಲಸ ಮಾಡುತ್ತಿದ್ದಾರೆ. ಸ್ವಾವಲಂಬಿ ಜೀವನಕ್ಕಾಗಿ ನಾನು ಚಹಾದಂಗಡಿ ನಡೆಸುತ್ತಿದ್ದೇನೆ ಎಂದು ಅವರು ತಿಳಿಸಿದರು.
ಓದಿ: ಮನೆ ಸಮೀಪವೇ ಮರಿ ಹಾಕಿದ ಚಿರತೆ: ಮರಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಚಾಮರಾಜನಗರ ರೈತರು