ಮ್ಯಾಂಚೆಸ್ಟರ್ ಯುನೈಟೆಡ್ನಿಂದ ವಿಶ್ವಶ್ರೇಷ್ಠ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಹೊರ ಬಂದಿದ್ದಾರೆ. ಫಿಫಾ ವಿಶ್ವಕಪ್‌ಗೂ ಮುನ್ನ ಟಿವಿ ಶೋಗೆ ನೀಡಿದ ಸಂದರ್ಶನದಲ್ಲಿ ರೊನಾಲ್ಡೊ, ತಾವು ಆಡುತ್ತಿದ್ದ ಕ್ಲಬ್ ಕುರಿತು ಅಸಮಾಧಾನ ತೋಡಿಕೊಂಡಿದ್ದರು. ಯುನೈಟೆಡ್ ತನಗೆ ದ್ರೋಹ ಮಾಡಿದೆ ಮತ್ತು ಮ್ಯಾನೇಜರ್ ಟೆನ್ ಹ್ಯಾಗ್ ನನಗೆ ಗೌರವ ಕೊಡುತ್ತಿಲ್ಲ ಎಂದು ಹೇಳಿದ್ದರು.
ಮ್ಯಾಂಚೆಸ್ಟರ್ ಯುನೈಟೆಡ್ ಜೊತೆಗೆ ಮಾತನಾಡಿ ನಮ್ಮ ಒಪ್ಪಂದವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇವೆ. ಮ್ಯಾಂಚೆಸ್ಟರ್ ಯುನೈಟೆಡ್ ಹಾಗು ನನ್ನ ಅಭಿಮಾನಿಗಳನ್ನು ಪ್ರೀತಿಸುತ್ತೇನೆ, ಅದು ಎಂದಿಗೂ ಬದಲಾಗದು. ಹೊಸ ಸವಾಲು ಎದುರಿಸಲು ಇದು ಸಕಾಲ. ತಂಡಕ್ಕೆ ಯಶಸ್ಸನ್ನು ಬಯಸುತ್ತೇನೆ ಎಂದು ರೊನಾಲ್ಡೋ ಆಶಿಸಿದ್ದಾರೆ. ಸದ್ಯ ಮ್ಯಾಂಚೆಸ್ಟರ್ ಕ್ಲಬ್‌ನಿಂದ ಹೊರಬಂದಿರುವ ಅವರು 2022ರ ಫಿಫಾ ವಿಶ್ವಕಪ್‌ನಲ್ಲಿ ಪೋರ್ಚುಗಲ್ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅಭಿಮಾನಿಗಳ ಸಂತಸ ಹೆಚ್ಚಿಸಿದೆ.
2003ರಲ್ಲಿ ಯುನೈಟೆಡ್‌ಗೆ ಮೊದಲ ಬಾರಿಗೆ ಸೇರಿದ ರೊನಾಲ್ಡೊ ತನ್ನ ಕೌಶಲ್ಯದಿಂದ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಮೂರು ಪ್ರೀಮಿಯರ್ ಲೀಗ್ ಪ್ರಶಸ್ತಿಗಳು, ಒಂದು ಎಫ್‌ಎ ಕಪ್, ಎರಡು ಲೀಗ್ ಕಪ್‌ಗಳು, ಚಾಂಪಿಯನ್ಸ್ ಲೀಗ್ ಸೇರಿದಂತೆ ಸಾಕಷ್ಟು ಕಿರೀಟಗಳು ಅವರ ಪ್ರತಿಭೆಗೆ ಸಾಕ್ಷಿಯಾಗಿವೆ.
ಇದನ್ನೂ ಓದಿ: ಫಿಫಾ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಬಗ್ಗುಬಡಿದ ಹಾಲಿ ಚಾಂಪಿಯನ್ ಫ್ರಾನ್ಸ್