ಚಂಡೀಗಢ: ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಬೆಂಬಲಕ್ಕೆ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಕೋಚ್ ಮಹಾವೀರ್ ಸಿಂಗ್ ಫೋಗಟ್ ನಿಂತಿದ್ದಾರೆ. ನ್ಯಾಯ ನೀಡದಿದ್ದರೆ ಪದಕಗಳನ್ನು ಹಿಂದಿರುಗಿಸುವುದಾಗಿ ಶುಕ್ರವಾರ ಹೇಳಿದ್ದಾರೆ. ಒಲಿಂಪಿಕ್ ಪದಕ ವಿಜೇತ ಜೋಡಿ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ಕುಸ್ತಿಪಟುಗಳು ಏಪ್ರಿಲ್ 23 ರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಪದಕ ವಿಜೇತರು ಪ್ರತಿಭಟನೆ ಮಾಡುತ್ತಿದ್ದಾರೆ. "ಪ್ರಕರಣದಲ್ಲಿ ನ್ಯಾಯ ಸಿಗದಿದ್ದರೆ ನನ್ನ ಪದಕಗಳನ್ನು ಹಿಂದಿರುಗಿಸುತ್ತೇನೆ" ಎಂದು ಮಹಾವೀರ್ ಫೋಗಟ್ ಹೇಳಿದ್ದಾರೆ. "ಅವರು ಎದುರಿಸುತ್ತಿರುವ ಆರೋಪಗಳ ಪ್ರಕಾರ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವರನ್ನು ಬಂಧಿಸಬೇಕು". ಸರಕಾರದೊಂದಿಗೆ ಮಾತನಾಡಿದ್ದೀರಾ ಅಥವಾ ಪಕ್ಷದ ಮಟ್ಟದಲ್ಲಿ ವಿಷಯ ಪ್ರಸ್ತಾಪಿಸಿದ್ದೀರಾ ಎಂದು ಕೇಳಿದಾಗ, "ಇಲ್ಲಿಯವರೆಗೆ ಯಾವುದೇ ಮಾತುಕತೆ ನಡೆದಿಲ್ಲ" ಎಂದು ಅವರು ಹೇಳಿದರು. ಮೂರು ವರ್ಷಗಳ ಹಿಂದೆ ಮಹಾವೀರ್ ಫೋಗಟ್ ಬಿಜೆಪಿಗೆ ಸೇರಿಸಿದ್ದರು.
ಬುಧವಾರ ರಾತ್ರಿ ದೆಹಲಿ ಪೊಲೀಸರು ತಮ್ಮನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾನಿರತ ಕುಸ್ತಿಪಟುಗಳು ಪದ್ಮಶ್ರೀ ಸೇರಿದಂತೆ ತಮ್ಮ ಪದಕಗಳು ಮತ್ತು ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸುವುದಾಗಿ ಹೇಳಿದ್ದರು. ಈ ನಡುವೆ, ಹರಿಯಾಣದ ಹಲವಾರು ಖಾಪ್‌ಗಳು ಸಹ ಪ್ರತಿಭಟನಾನಿರತ ಕ್ರೀಡಾಪಟುಗಳಿಗೆ ಬೆಂಬಲವಾಗಿ ಬಂದಿದ್ದಾರೆ.
ಗುರುವಾರ ಹಿಸಾರ್, ಭಿವಾನಿ, ಜಿಂದ್ ಮತ್ತು ರೋಹ್ಟಕ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಖಾಪ್‌ಗಳು ಕುಸ್ತಿಪಟುಗಳಿಗೆ ನ್ಯಾಯ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ನಿರತರನ್ನು ಭೇಟಿಮಾಡಲು ತೆರಳಿದ್ದ, ಬಬಿತಾ ಅವರ ಪೋಷಕರಾದ ಮಹಾವೀರ್ ಫೋಗಟ್ ಮತ್ತು ಗೀತಾ ಫೋಗಟ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಪ್ರತಿಭಟನೆಯ ಮುಂಚೂಣಿಯಲ್ಲಿರುವ ವಿನೇಶ್ ಪೋಗಟ್ ಬಬಿತಾ ಅವರಿಗೆ ಸಂಬಂಧದಲ್ಲಿ ಚಿಕ್ಕಪ್ಪ ಆಗಬೇಕು.
ಜನವರಿಯಲ್ಲಿ ಪ್ರತಿಭಟನೆ ಆರಂಭ: ವರ್ಷದ ಆರಂಭದಲ್ಲಿ ಕುಸ್ತಿಪಟುಗಳು ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ಪ್ರತಿಭಟನೆ ಆರಂಭಿಸಿದ್ದರು. ಇದಕ್ಕೆ ಸರ್ಕಾರ ಪಿಟಿ ಉಷಾ ಅವರ ಅಧ್ಯಕ್ಷತೆಯಲ್ಲಿ ಕಮಿಟಿ ರಚನೆ ಮಾಡಿತ್ತು. ಆ ಕಮಿಟಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಸಿಂಗ್ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ಕುಸ್ತಿಪಿಟುಗಳು ಏಪ್ರಿಲ್ 23 ರಿಂದ ಮತ್ತೆ ಪ್ರತಿಭಟನೆ ಆರಂಭಿಸಿ, ಎಫ್ಐಆರ್ ದಾಖಲು ಮಾಡುವಂತೆ ಸುಪ್ರೀಂಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ನೀಡಿದ ಆದೇಶದಂತೆ ದೆಹಲಿ ಪೊಲೀಸರು ಸಿಂಗ್ ವಿರುದ್ಧ ಎಫ್ಐಆರ್ ಮಾಡಿದ್ದು, ಆದರೆ ಅವರನ್ನು ಇನ್ನೂ ಬಂಧಿಸಿಲ್ಲ. ಈಗ ಕುಸ್ತಿ ಪಟುಗಳು ಬಂಧನಕ್ಕೆ ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: 2023 ವಂಡಾ ಡೈಮಂಡ್ ಲೀಗ್; ದೋಹಾದ ಕತಾರ್ನಲ್ಲಿ ನಾಳೆಯಿಂದ ಆರಂಭ; ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ಭಾಗಿ