ಲೌಸಾನ್ನೆ: ಟೋಕಿಯೋ ಒಲಿಂಪಿಕ್ಸ್ನ ನಿರಾಶ್ರಿತರ ತಂಡ 12 ಕ್ರೀಡೆಗಳಿಗಾಗಿ 29 ಅಥ್ಲೀಟ್ಗಳನ್ನು ಆಯ್ಕೆ ಮಾಡಿದೆ.
ಒಟ್ಟು 55 ಆಥ್ಲೀಟ್ಸ್ಗಳಲ್ಲಿ 29 ಅಥ್ಲೀಟ್ಗಳ ನಿರಾಶ್ರಿತರ ತಂಡವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮಂಗಳವಾರ ಆಯ್ಕೆ ಮಾಡಿದೆ. ಈ ಅಥ್ಲೀಟ್ಗಳು ಯುದ್ದ, ಕಿರುಕುಳ ಮತ್ತು ದೇಶದ್ರೋಹದ ಆತಂಕದಿಂದ ತಮ್ಮ ತವರು ದೇಶಗಳನ್ನು ಬಿಟ್ಟು ಬಂದವರಾಗಿದ್ದಾರೆ. ಇನ್ನು, ಕೆಲವರು ಸ್ಕಾಲರ್ಶಿಪ್ ಪಡೆದು ಬೇರೊಂದು ತವರು ದೇಶದಲ್ಲಿ ತರಬೇತಿ ಪಡೆಯುತ್ತಿರುವವರಾಗಿದ್ದಾರೆ.
2016ರ ರಿಯೋ ಒಲಿಂಪಿಕ್ಸ್ನಲ್ಲಿ ಮೊದಲ ಬಾರಿಗೆ ಈ ನಿರಾಶ್ರಿತರ ತಂಡವನ್ನು ಪರಿಚಯಿಸಿತ್ತು. ಅಂದು 10 ಆಟಗಾರರಿದ್ದ ಈ ತಂಡ 29ಕ್ಕೆ ಏರಿದೆ. ಇವರು ಮೂಲತಃ ಆಫ್ಘಾನಿಸ್ತಾನ, ಕ್ಯಾಮರೂನ್, ಕಾಂಗೋ, ರಿಪಬ್ಲಿಕ್ ಆಫ್ ಕಾಂಗೋ, ಎರಿಟ್ರಿಯಾ, ಇರಾನ್, ಇರಾಕ್, ದಕ್ಷಿಣ ಸುಡಾನ್, ಸುಡಾನ್, ಸಿರಿಯಾ, ವೆನೆಜುವೆಲಾದವರಾಗಿದ್ದಾರೆ.
ಅವರು ಈಜು, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಕ್ಯಾನೋಯಿಂಗ್, ಸೈಕ್ಲಿಂಗ್, ಜೂಡೋ, ಕರಾಟೆ, ಶೂಟಿಂಗ್, ಟೇಕ್ವಾಂಡೋ, ವೇಟ್‌ಲಿಫ್ಟಿಂಗ್ ಮತ್ತು ಕುಸ್ತಿಯಲ್ಲಿ ಸ್ಪರ್ಧಿಸಲಿದ್ದಾರೆ.
"ನೀವು ನಮ್ಮ ಒಲಿಂಪಿಕ್ ಸಮುದಾಯದ ಅವಿಭಾಜ್ಯ ಅಂಗ ಮತ್ತು ನಾವು ನಿಮ್ಮನ್ನು ತೆರೆದ ಕೈಗಳಿಂದ ಸ್ವಾಗತಿಸುತ್ತೇವೆ" ಎಂದು ಐಒಸಿ ಅಧ್ಯಕ್ಷ ಥಾಮಸ್ ಬ್ಯಾಚ್ ಹೇಳಿದ್ದಾರೆ. ಈ ನಿರಾಶ್ರಿತರ ತಂಡ ಒಟ್ಟು 206 ರಾಷ್ಟ್ರಗಳ ಅಥ್ಲೀಟ್ಗಳ ವಿರುದ್ಧ ಸೆಣಸಾಡಲಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಜುಲೈ 23ರಿಂದ ಆಗಸ್ಟ್ 8ರವರೆಗೆ ನಡೆಯಲಿದೆ.
ಇದನ್ನು ಓದಿ:Exclusive: ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವುದರ ಜೊತೆಗೆ ಸ್ಟಾರ್ ಆಟಗಾರರನ್ನು ಮಣಿಸುವ ಗುರಿ ಹೊಂದಿರುವ ಸತಿಯಾನ್