ಬೆಂಗಳೂರು: 8ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ರೋಚಕ ಸೋಲಿನ ಅಭಿಯಾನ ಮುಂದುವರೆದಿದ್ದು, ಇಂದಿನ ಪಂದ್ಯದಲ್ಲಿ ಪುಣೇರಿ ವಿರುದ್ಧ 35-37 ಪಾಯಿಂಟ್ಗಳ ಅಂತರದಿಂದ ಮತ್ತೊಂದು ಪಂದ್ಯ ಕೈಚೆಲ್ಲಿದೆ.
ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಗ್ರ್ಯಾಂಡ್ ಶೆರಟಾನ್ ಹೋಟೆಲ್ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಪುಣೇರಿ ಪಲ್ಟನ್ ವಿರುದ್ಧ ಸೋಲು ಕಂಡಿರುವ ಪವನ್ ಶೆರಾವತ್ ಪಡೆ ಗೆಲುವಿನ ಹಳಿಗೆ ಮರಳಲು ಮತ್ತೊಮ್ಮೆ ವಿಫಲವಾಯಿತು. ಈ ಹಿಂದಿನ ಎರಡು ಪಂದ್ಯಗಳಲ್ಲಿ ಪಾಟ್ನಾ ಮತ್ತು ಬೆಂಗಾಲ್ ವಾರಿಯರ್ಸ್ ವಿರುದ್ಧದ ರೋಚಕ ಸೋಲು ಕಂಡಿದ್ದ ಬುಲ್ಸ್ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಲಿದೆ ಎಂಬ ಇರಾದೆ ಇತ್ತು. ಆದರೆ, ಪುಣೇರಿ ವಿರುದ್ಧ ಕೂಡ ಸೋಲಿನ ಸರಪಳಿಯಿಂದ ಹೊರಬರಲು ಸಾಧ್ಯವಾಗಲಿಲ್ಲ.
ಪುಣೇರಿ ವಿರುದ್ಧದ ಪಂದ್ಯದಲ್ಲಿ ಹೆಚ್ಚು ರೈಡ್ ಪಾಯಿಂಟ್ ಕಲೆ ಹಾಕಲು ಯಶಸ್ವಿಯಾದ ಬುಲ್ಸ್, ಟ್ಯಾಕಲ್ ಪಾಯಿಂಟ್ ಮತ್ತು ಆಲ್ಔಟ್ನಲ್ಲಿ ಅಂಕಗಳಿಕೆ ಮಾಡಲು ಸಾಧ್ಯವಾಗಲಿಲ್ಲ. ಇದೇ ತಂಡದ ಸೋಲಿಗೆ ಕಾರಣವಾಯಿತು.
ಬೆಂಗಳೂರು ಬುಲ್ಸ್ ರೈಡ್ನಲ್ಲಿ 24 ಪಾಯಿಂಟ್, ಟ್ಯಾಕಲ್ನಲ್ಲಿ 8 ಹಾಗೂ 3 ಹೆಚ್ಚುವರಿ ಪಾಯಿಂಟ್ಗಳಿಕೆ ಮಾಡಿತು. ಎದುರಾಳಿ ಪುಣೇರಿ ತಂಡ ರೈಡಿಂಗ್ನಲ್ಲಿ 20, ಟ್ಯಾಕಲ್ನಲ್ಲಿ 13 ಹಾಗೂ ಆಲ್ಔಟ್ನಲ್ಲಿ 4 ಪಾಯಿಂಟ್ ಗಳಿಸಿತು. ಜನವರಿ 2ರಂದು ನಡೆದಿದ್ದ ಪಂದ್ಯದಲ್ಲಿ ಬುಲ್ಸ್ 40-29ರಿಂದ ಪುಣೆ ತಂಡವನ್ನು ಬಗ್ಗುಬಡಿದಿತ್ತು. ಆದರೆ ಇಂದು ನಡೆದ ಪಂದ್ಯದಲ್ಲಿ ಸೋಲು ಕಂಡಿದೆ. ಬೆಂಗಾಲ್ ವಾರಿಯರ್ಸ್ ಮತ್ತು ಯು ಮುಂಬಾದಂತಹ ಬಲಿಷ್ಠ ತಂಡಗಳಿಗೆ ಸೋಲುಣಿಸಿದ್ದ ಪುಣೆ ಕಳೆದ ಎರಡು ಪಂದ್ಯಗಳಲ್ಲಿ ಯುಪಿ ಯೋಧಾ ಮತ್ತು ಹರಿಯಾಣ ವಿರುದ್ಧ ಸೋಲು ಕಂಡಿತ್ತು. ಆದರೆ ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡಿ ಗೆಲುವಿನ ಲಯಕ್ಕೆ ಮರಳಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ