ಅಹಮದಾಬಾದ್: ಒಂಬತ್ತು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಪ್ರೊ ಕಬಡ್ಡಿ ಲೀಗ್‌ನ ಹತ್ತನೇ ಆವೃತ್ತಿಗೆ ಇಂದು ಚಾಲನೆ ಸಿಗಲಿದೆ. ಅಹಮದಾಬಾದ್ನ ಅಕ್ಷರ್ ರಿವರ್ ಕ್ರೂಸ್ನಲ್ಲಿ ಶುಕ್ರವಾರ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಗೆ ಸಾಂಕೇತಿಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪಿಕೆಎಲ್ 9ನೇ ಆವೃತ್ತಿಯ ವಿಜೇತ ತಂಡದ ನಾಯಕ ಸುನಿಲ್ ಕುಮಾರ್ (ಜೈಪುರ ಪಿಂಕ್ ಪ್ಯಾಂಥರ್ಸ್) ಮತ್ತು 10ನೇ ಆವೃತ್ತಿಯ ಆರಂಭಿಕ ಪಂದ್ಯದ ನಾಯಕರಾದ ಪವನ್ ಶೆಹ್ರಾವತ್ (ತೆಲುಗು ಟೈಟಾನ್ಸ್) ಮತ್ತು ಫಜಲ್ ಅಟ್ರಾಚಲಿ (ಗುಜರಾತ್ ಜೈಂಟ್ಸ್) ಸೇರಿದಂತೆ ಎಲ್ಲಾ ತಂಡಗಳ ನಾಯಕರು ಹಾಜರಿದ್ದರು.
ಕಬಡ್ಡಿ ಮತ್ತು ಭಾರತೀಯರ ನಡುವೆ ಹಲವಾರು ವರ್ಷಗಳಿಂದ ಬಲವಾದ ನಂಟಿದೆ. ಆದಾಗ್ಯೂ ಸಹ 2014 ರಲ್ಲಿ ಪ್ರೊ ಕಬಡ್ಡಿ ಲೀಗ್ ಆರಂಭವಾದ ನಂತರ ಮತ್ತಷ್ಟು ಆಕರ್ಷಕವಾಗಿಸಲು 30-ಸೆಕೆಂಡುಗಳ ರೇಡ್, ಮಾಡು ಇಲ್ಲವೇ ಮಡಿ ದಾಳಿಗಳು (ಡು ಆರ್ ಡೈ ರೈಡ್), ಸೂಪರ್ ರೇಡ್ಗಳು ಮತ್ತು ಸೂಪರ್ ಟ್ಯಾಕಲ್ಗಳಂತಹ ಹೊಸ ನಿಯಮಗಳನ್ನು ಜಾರಿಗೆ ತರುವ ಮೂಲಕ ಲಕ್ಷಾಂತರ ಅನುಯಾಯಿಗಳನ್ನು ಆಕರ್ಷಿಸಲು ಕಬಡ್ಡಿಯನ್ನು ಸಜ್ಜುಗೊಳಿಸಲಾಗಿದೆ.
ಸಬರಮತಿ ನದಿಯಲ್ಲಿ ಕ್ರೂಸ್ನಲ್ಲಿ ವಿಶಿಷ್ಟವಾಗಿ ನಡೆದ ಸಾಂಕೇತಿಕ ಚಾಲನೆ ವೇಳೆ ಮಾತನಾಡಿದ ಪ್ರೊ ಕಬಡ್ಡಿಯ ಆಯುಕ್ತ ಅನುಪಮ್ ಗೋಸ್ವಾಮಿ, "12 ನಗರಗಳ ಸ್ವರೂಪಕ್ಕೆ ಟೂರ್ನಿ ಮರಳಿರುವುದು ಸೀಸನ್ 10ರ ಹೆಗ್ಗುರುತಾಗಿದೆ. 2019 ರಿಂದ ತಮ್ಮ ಸ್ವಂತ ಪ್ರದೇಶದಲ್ಲಿ ಪ್ರೊ ಕಬಡ್ಡಿ ಲೀಗ್ ವೀಕ್ಷಿಸಲು ಸಾಧ್ಯವಾಗದ ಕನಿಷ್ಠ ಒಂಬತ್ತು ನಗರಗಳಲ್ಲಿ ಈ ಬಾರಿಯ ಲೀಗ್ ನಡೆಯಲಿದೆ. 12 ನಗರಗಳಲ್ಲಿ ಲೀಗ್ ಅನ್ನು ಆಯೋಜಿಸುವುದರಿಂದ ಫ್ರಾಂಚೈಸಿಯು ತನ್ನ ತವರು ಪ್ರದೇಶಗಳಲ್ಲಿನ ಸಮುದಾಯಗಳೊಂದಿಗೆ ಬಲವಾದ ಸಂಪರ್ಕವನ್ನು ರೂಪಿಸಲು ಸಹಾಯಕವಾಗಲಿದೆ. ಇಕೆಎ ಅರೆನಾದಲ್ಲಿ ಶನಿವಾರ ನಡೆಯಲಿರುವ ಪಿಕೆಎಲ್ 10ನೇ ಆವೃತ್ತಿಯ ಬ್ಲಾಕ್ ಬಸ್ಟರ್ ಆರಂಭಿಕ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವು ತೆಲುಗು ಟೈಟಾನ್ಸ್ ವಿರುದ್ಧ ಸೆಣಸಲಿದೆ. ಟೈಟಾನ್ಸ್ ತಂಡದ ನಾಯಕ ಮತ್ತು ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಪವನ್ ಸೆಹ್ರಾವತ್, ತಮ್ಮ ತಂಡದೊಂದಿಗೆ ಮೊದಲ ಪಂದ್ಯಕ್ಕೆ ಸಜ್ಜಾಗಿದ್ದಾರೆ ಎಂದು ಹೇಳಿದರು.
''ನಾನು ಮ್ಯಾಟ್ ಮೇಲೆ ಹೆಜ್ಜೆ ಹಾಕಲು ತುಂಬಾ ಉತ್ಸುಕನಾಗಿದ್ದೇನೆ. ಕಳೆದ ಋತುವನ್ನು ಕಳೆದುಕೊಳ್ಳುವುದು ನನಗೆ ಕಠಿಣ ಕ್ಷಣವಾಗಿತ್ತು. ಆದಾಗ್ಯೂ, ಮುಂಬರುವ ಋತುವಿಗಾಗಿ ನಾನು ಸಾಕಷ್ಟು ಶಕ್ತಿಯನ್ನು ಉಳಿಸಿದ್ದೇನೆ ಮತ್ತು ಮೊದಲ ಪಂದ್ಯದಲ್ಲಿ ಫಜೆಲ್ ಅವರನ್ನು ಎದುರಿಸಲು ನಾನು ಉತ್ಸುಕನಾಗಿದ್ದೇನೆ. ನಮ್ಮ ಆಟಗಾರರು ತರಬೇತಿ ಶಿಬಿರದ ಮೂಲಕ ಋತುವಿಗೆ ಉತ್ತಮ ತಯಾರಿ ಹೊಂದಿದ್ದಾರೆ. ಗುಜರಾತ್ ಜೈಂಟ್ಸ್ ವಿರುದ್ಧದ ಮೊದಲ ಪಂದ್ಯಕ್ಕೆ ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ'' ಎಂದು ಪವನ್ ಸೆಹ್ರಾವತ್ ತಿಳಿಸಿದರು.
ಪ್ರೊ ಕಬಡ್ಡಿ ಲೀಗ್‌ನ ಅತ್ಯಂತ ದುಬಾರಿ ಡಿಫೆಂಡರ್ ಮತ್ತು ಗುಜರಾತ್ ಜೈಂಟ್ಸ್ ನಾಯಕ ಫಝೆಲ್ ಅಟ್ರಾಚಲಿ ಮಾತನಾಡಿ, "ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯ ಭಾಗವಾಗಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಇದು ವಿಶ್ವದ ಅತ್ಯುತ್ತಮ ಕಬಡ್ಡಿ ಪಂದ್ಯಾವಳಿಯಾಗಿದೆ. ಋತುವನ್ನು ಪ್ರಾರಂಭಿಸಲು ನಾವು ಮತ್ತಷ್ಟು ಕಾಯಲು ಸಾಧ್ಯವಿಲ್ಲ. ಈ ವರ್ಷ ಗುಜರಾತ್ ಜೈಂಟ್ಸ್ ಪರ ಆಡಲು ನನಗೆ ತುಂಬಾ ಸಂತೋಷವಾಗಿದೆ. ನಮ್ಮಲ್ಲಿ ಸಾಕಷ್ಟು ಯುವ ಪ್ರತಿಭೆಗಳು ಮತ್ತು ಉತ್ತಮ ತರಬೇತುದಾರರಿದ್ದಾರೆ. ನಾನು ಉತ್ತಮ ಋತುವನ್ನು ಎದುರು ನೋಡುತ್ತಿದ್ದೇನೆ,’’ ಎಂದರು.
ಕಳೆದ ಆವೃತ್ತಿಯ ಫೈನಲ್ನಲ್ಲಿ ಪುಣೇರಿ ಪಲ್ಟನ್ ತಂಡವನ್ನು ಮಣಿಸಿದ್ದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಪ್ರೊ ಕಬಡ್ಡಿ ಲೀಗ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಹಾಲಿ ಚಾಂಪಿಯನ್ ಆಗಿ 10ನೇ ಆವೃತ್ತಿಗೆ ಹೋಗುವ ಬಗ್ಗೆ ಮಾತನಾಡಿದ ಜೈಪುರ ಪಿಂಕ್ ಪ್ಯಾಂಥರ್ಸ್ ನಾಯಕ ಸುನಿಲ್ ಕುಮಾರ್, "ಟ್ರೋಫಿ ನಮ್ಮೊಂದಿಗೆ ಉಳಿಯುತ್ತದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ಈ ಋತುವಿಗಾಗಿ ನಾವು ಇನ್ನೂ ಕಠಿಣ ತರಬೇತಿ ನೀಡಿದ್ದೇವೆ. ನಾವು ಕಳೆದ ವರ್ಷ ಉತ್ತಮ ಆಟಗಾರರ ಸಂಯೋಜನೆಯನ್ನು ಜಾರಿಗೆ ತಂದಿದ್ದೇವೆ ಮತ್ತು ನಾವು ಈ ವರ್ಷ ಅದೇ ಸಂಯೋಜನೆಯನ್ನು ಬಳಸುವುದನ್ನು ಮುಂದುವರಿಸುತ್ತೇವೆ. ಪಂದ್ಯಾವಳಿಗಾಗಿ ನಾವು ಸಾಕಷ್ಟು ತಯಾರಿ ನಡೆಸಿದ್ದೇವೆ,’’ ಎಂದರು.
ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯ ಮೊದಲ ಹಂತ ಡಿಸೆಂಬರ್ 2 ರಿಂದ 7ರವರೆಗೆ ನಡೆಯಲಿದೆ. ನಂತರ, ಬೆಂಗಳೂರು (8-13 ಡಿಸೆಂಬರ್ 2023), ಪುಣೆ (15-20 ಡಿಸೆಂಬರ್ 2023), ಚೆನ್ನೈ (22-27 ಡಿಸೆಂಬರ್ 2023), ನೋಯ್ಡಾ (2023 ಡಿಸೆಂಬರ್ 29 - 3 ಜನವರಿ 2024), ಮುಂಬೈ (5-10 ಜನವರಿ 2024), ಜೈಪುರ (12-17 ಜನವರಿ 2024), ಹೈದರಾಬಾದ್ (19-24 ಜನವರಿ 2024), ಪಾಟ್ನಾ (2024 ರ ಜನವರಿ 26-31), ಡೆಲ್ಲಿ (2024 ಫೆಬ್ರವರಿ 2-7), ಕೋಲ್ಕತ್ತಾ (2024 ಫೆಬ್ರವರಿ 9-14), ಪಂಚಕುಲ (2024 ಫೆಬ್ರವರಿ 16-21)ರ ವರೆಗೆ ನಡೆಯಲಿದೆ.
ಇದನ್ನೂ ಓದಿ: ಅಕ್ಷರ್, ಬಿಷ್ಣೋಯ್ ಸ್ಪಿನ್ಗೆ ನಲುಗಿದ ಕಾಂಗರೂ ಪಡೆ: ಭಾರತಕ್ಕೆ ಸರಣಿ ಜಯ