ಮುಂಬೈ: 9ನೇ ಆವೃತ್ತಿ ಪ್ರೊ ಕಬಡ್ಡಿಗೋಸ್ಕರ ಇಂದು ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಬೆಂಗಳೂರು ಬುಲ್ಸ್ ತಂಡದ ಮಾಜಿ ನಾಯಕ ಪವನ್ ಶೆರಾವತ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಇವರು 2.26 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕ ಇಷ್ಟೊಂದು ಹಣಕ್ಕೆ ಖರೀದಿಯಾಗಿರುವ ಮೊದಲ ಪ್ಲೇಯರ್ ಎಂಬ ಹೆಗ್ಗಳಿಕೆ ಪಾತ್ರರಾದರು.
ಸ್ಟಾರ್ ರೈಡರ್ ಆಗಿ ಗುರುತಿಸಿಕೊಂಡಿರುವ ಪವನ್ ಕುಮಾರ್ ಶೆರಾವತ್ಗೆ ತಮಿಳ್ ತಲೈವಾಸ್ 2.26 ಕೋಟಿ ರೂ. ನೀಡಿ ಖರೀದಿಸಿತು. ವಿಕಾಸ್ ಖಂಡೋಲಾ 1.70 ಕೋಟಿ ರೂ.ಗೆ ಬೆಂಗಳೂರು ಬುಲ್ಸ್ ತಂಡ ಸೇರಿದ್ದಾರೆ. ಈ ಮೂಲಕ ಅತಿ ಹೆಚ್ಚಿನ ಬೆಲೆಗೆ ಸೋಲ್ಡ್ ಆಗಿರುವ ಎರಡನೇ ಪ್ಲೇಯರ್ ಆಗಿ ಹೊರಹೊಮ್ಮಿದರು.
ಈ ಹಿಂದೆ 1.65 ಕೋಟಿ ರೂಪಾಯಿಗೆ ಪ್ರದೀಪ್ ನರ್ವಾಲ್ ಮಾರಾಟವಾಗಿದ್ದು ಪ್ರೊ ಕಬಡ್ಡಿ ಲೀಗ್ನಲ್ಲಿ ರೆಕಾರ್ಡ್ ಆಗಿದೆ. ಆದರೆ, ಪವನ್ ಹಾಗೂ ವಿಕಾಸ್ ಈ ದಾಖಲೆ ಬ್ರೇಕ್ ಮಾಡಿದ್ದಾರೆ. 30 ಲಕ್ಷ ರೂ ಮೂಲಬೆಲೆ ಹೊಂದಿದ್ದ ಬೆಂಗಳೂರು ಬುಲ್ಸ್ ತಂಡದ ಪವನ್ ಕುಮಾರ್ ಶೆರಾವತ್ಗೆ ಮೊದಲು ಹರಿಯಾಣ ಸ್ಟೀಲರ್ಸ್ 1 ಕೋಟಿ ರೂ. ಬಿಡ್ ಮಾಡಿತು. ಆದರೆ, ಕೊನೆಯದಾಗಿ ಅವರು ತಮಿಳ್ ತಲೈವಾಸ್ ಪಾಲಾದರು.
ಇದನ್ನೂ ಓದಿ: ಪ್ರೊ ಕಬಡ್ಡಿ ಲೀಗ್ ಹರಾಜು: ಯಾರ ಪಾಲಾಗ್ತಾರೆ ಬುಲ್ಸ್ನ ಪವನ್ ಶೆರಾವತ್?
ಇರಾನ್ ದೇಶದ ಪ್ರಮುಖ ಆಟಗಾರ ಮೊಹಮ್ಮದ್ ಇಸ್ಮಾಯಿಲ್ ಅವರಿಗೆ 87 ಲಕ್ಷ ರೂಪಾಯಿ ನೀಡಿ ಪುಣೆರಿ ಪಲ್ಟನ್ಸ್ ಖರೀದಿ ಮಾಡಿದೆ. ಉಳಿದಂತೆ 1.38 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕ ಫಜಲ್ ಅತ್ರಾಚಲಿ ಅತ್ಯಂತ ದಬಾರಿ ಡಿಫೆಂಡರ್ ಆಗಿದ್ದಾರೆ. ಪ್ರದೀಪ್ ನರ್ವಾಲ್ಗೆ 90 ಲಕ್ಷ ನೀಡಿ ಯುಪಿ ಯೋಧಾಸ್ ಉಳಿಸಿಕೊಂಡಿದೆ. ಆದರೆ, ಈ ಹಿಂದಿನ ಲೀಗ್ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸಂದೀಪ್ ನರ್ವಾಲ್ ಮಾತ್ರ ಮೊದಲ ದಿನ ಮಾರಾಟವಾಗಿಲ್ಲ.
ಇಂದು ಯಾರೆಲ್ಲ ಮಾರಾಟ?
- ಪವನ್ ಶೆರಾವತ್-ತಮಿಳ್ ತಲೈವಾಸ್: 2.26 ಕೋಟಿ ರೂ.
- ವಿಕಾಸ್ ಖಂಡೋಲಾ-ಬೆಂಗಳೂರು ಬುಲ್ಸ್: 1.70 ಕೋಟಿ ರೂ.
- ಫಜಲ್ ಅತ್ರಾಚಲಿ-ಪುಣೆರಿ ಪಲ್ಟನ್ಸ್:1.38 ಕೋಟಿ ರೂ.
- ಪ್ರದೀಪ್ ನರ್ವಾಲ್-ಯುಪಿ ಯೋಧಾ:90 ಲಕ್ಷ ರೂ.
- ಮೊಹಮ್ಮದ್ ಇಸ್ಮಾಯಿಲ್ ನಬಿಬಕ್ಷ್ ಪುಣೆರಿ ಪಲ್ಟನ್ಸ್: 87 ಲಕ್ಷ ರೂ.
- ಸಚಿನ್-ಪಟನಾ ಪೈರೇಟ್ಸ್: 81 ಲಕ್ಷ ರೂ.
- ಮಂಜಿತ್-ಹರ್ಯಾಣ ಸ್ಟೀಲರ್ಸ್: 80 ಲಕ್ಷ ರೂ.
- ಅಜಿತ್ ಕುಮಾರ್-ಜೈಪುರ ಪಿಂಕ್ ಪ್ಯಾಂಥರ್ಸ್: 66 ಲಕ್ಷ ರೂ.
- ಪರ್ವೇಶ್ ಬೈನ್ಸ್‌ವಾಲ್-ತೆಲುಗು ಟೈಟಾನ್ಸ್: 62 ಲಕ್ಷ ರೂ.
- ಅಭಿಷೇಕ್ ಸಿಂಗ್-ತೆಲುಗು ಟೈಟಾನ್ಸ್: 60 ಲಕ್ಷ ರೂ.
- ಸುರ್ಜೀತ್ ಸಿಂಗ್-ತೆಲುಗು ಟೈಟಾನ್ಸ್: 50 ಲಕ್ಷ ರೂ.
- ದೀಪಕ್ ನಿವಾಸ್ ಹೂಡಾ-ಬೆಂಗಾಲ್ ವಾರಿಯರ್ಸ್: 43 ಲಕ್ಷ ರೂ.
- ರೋಹಿತ್ ಗುಲಿಯಾ-ಪಟನಾ ಪೈರೇಟ್ಸ್: 30 ಲಕ್ಷ ರೂ.
- ಸಂದೀಪ್ ಧುಲ್-ದಬಾಂಗ್ ದೆಹಲಿ: 40 ಲಕ್ಷ ರೂ.
ಕಣ್ಣೀರು ಹಾಕಿದ ಬುಲ್ಸ್ ಕೋಚ್: ಬೆಂಗಳೂರು ತಂಡದ ಮಾಜಿ ಕ್ಯಾಪ್ಟನ್ ಪವನ್ ಶೆರಾವತ್ ಮತ್ತೊಂದು ತಂಡದ ಪಾಲಾಗುತ್ತಿದ್ದಂತೆ ತಂಡದ ಮುಖ್ಯ ಕೋಚ್ ರಣದೀರ್ ಸಿಂಗ್ ಕಣ್ಣೀರು ಹಾಕಿರುವ ಘಟನೆ ನಡೆಯಿತು.