ನವದೆಹಲಿ: ತಿಂಗಳ ಕೊನೆಯ ಭಾನುವಾರ ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ 'ಮನ್ ಕಿ ಬಾತ್‌ನ 104 ನೇ ಸಂಚಿಕೆ' ಇಂದು ಪ್ರಸಾರವಾಯಿತು. ಇದರಲ್ಲಿ ಭಾರತ ವಿಶ್ವಮಟ್ಟದಲ್ಲಿ ಹೆಸರು ಮಾಡಿದ ಸಾಧನೆ 'ಚಂದ್ರಯಾದ - 3' ರ ಬಗ್ಗೆ ಮಾತನಾಡಿದ ನಂತರ ಕ್ರೀಡಾ ವಿಭಾಗದಲ್ಲಿ ವಿಶ್ವ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಅಸಾಧಾರಣ ಸಾಧನೆಗಾಗಿ ಭಾರತೀಯ ಕ್ರೀಡಾಪಟುಗಳನ್ನು ಪ್ರಶಂಸಿಸಿದ್ದಾರೆ.
ಈ ವರ್ಷ ಚೀನಾದ ವಿಶ್ವ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಭಾರತೀಯ ಆಟಗಾರರು 11 ಚಿನ್ನ, 5 ಬೆಳ್ಳಿ ಮತ್ತು 10 ಕಂಚು ಸೇರಿ ಒಟ್ಟು 26 ಪದಕಗಳನ್ನು ಗೆದ್ದಿದ್ದಾರೆ. ಭಾರತವು ಎಫ್ಐಎಸ್ಯು (FISU) ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಏಳನೇ ಸ್ಥಾನ ಗಳಿಸಿತು. 31ನೇ ಆವೃತ್ತಿಯ ಕ್ರೀಡಾಕೂಟ ಜುಲೈ 28 ರಿಂದ ಆಗಸ್ಟ್ 8ರ ವರೆಗೆ ನಡೆದಿತ್ತು. 1959ರಿಂದ ನಡೆದುಕೊಂಡು ಬಂದಿದ್ದ ವಿಶ್ವ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಒಟ್ಟಾರೆ 18 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಒಂದು ವರ್ಷ ಒಟ್ಟಾರೆ 26 ಪದಕ ಗೆದ್ದು ಅದ್ವಿತೀಯ ಸಾಧನೆ ಮಾಡಿದೆ. ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್‌ನ ಮುಂದಿನ ಆವೃತ್ತಿಯು 2025 ರಲ್ಲಿ ಜರ್ಮನಿಯಲ್ಲಿ ನಡೆಯಲಿದೆ.
"ಕೆಲವು ದಿನಗಳ ಹಿಂದೆ ಚೀನಾದಲ್ಲಿ ವಿಶ್ವ ವಿಶ್ವವಿದ್ಯಾನಿಲಯ ಕ್ರೀಡಾಕೂಟ ನಡೆಯಿತು. ಈ ಬಾರಿ ಭಾರತ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ. ನಮ್ಮ ಆಟಗಾರರು ಒಟ್ಟು 26 ಪದಕಗಳನ್ನು ಗೆದ್ದಿದ್ದಾರೆ, ಅದರಲ್ಲಿ 11 ಚಿನ್ನದ ಪದಕಗಳನ್ನು ಜಯಿಸಿದ್ದಾರೆ. ನಮಗೆ ಸಂತೋಷವಾಗುತ್ತದೆ. 1959 ರಿಂದ ನಡೆದ ಎಲ್ಲಾ ವಿಶ್ವ ವಿಶ್ವವಿದ್ಯಾನಿಲಯ ಕ್ರೀಡಾಕೂಟಗಳಲ್ಲಿ ಗೆದ್ದ ಎಲ್ಲಾ ಪದಕಗಳನ್ನು ಸೇರಿಸಿದರೂ, ಅದು ಕೇವಲ 18 ಅನ್ನು ತಲುಪುತ್ತದೆ. ಈ ಬಾರಿ ನಮ್ಮ ಆಟಗಾರರು 26 ಪದಕಗಳನ್ನು ಗೆದ್ದಿದ್ದಾರೆ. ನೀವು ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದೀರಿ ಎಂದು ಮನ್ ಕಿ ಬಾತ್‌ನ 104 ನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿ ಹೇಳಿದರು.
ಡಬ್ಲ್ಯುಯುಜಿಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಸಂಯುಕ್ತ ಬಿಲ್ಲುಗಾರ್ತಿ ಪ್ರಗತಿಯೊಂದಿಗೆ ಸಂವಾದ ನಡೆಸಿದ ಮೋದಿ, "ಕ್ರೀಡಾಕೂಟದಲ್ಲಿ ನಿಮ್ಮ ಪ್ರದರ್ಶನದ ಮೂಲಕ ನೀವು ಪ್ರತಿ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ. ಈ ದೊಡ್ಡ ಯಶಸ್ಸನ್ನು ಸಾಧಿಸಿದ ನಂತರ ನಿಮಗೆ ಏನನಿಸುತ್ತದೆ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಚಿನ್ನದ ಪದಕದ ಸಾಧನೆಯ ನಂತರ ಭಾರತದ ಧ್ವಜವನ್ನು ಹಾರಿಸುವುದನ್ನು ನೋಡುವುದು ನನಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಪ್ರಗತಿ ಹೇಳಿದ್ದಾರೆ. "ಬೆಳ್ಳಿಗೆ ತೃಪ್ತಿಪಟ್ಟ ನಂತರ, ನಾನು ಚಿನ್ನ ಗೆಲ್ಲಲು ಮತ್ತು ತ್ರಿವರ್ಣ ಧ್ವಜ ಹಾರುವುದನ್ನು ನೋಡಲು ನಿರ್ಧರಿಸಿದೆ. ಅಂತಿಮವಾಗಿ ಚಿನ್ನ ಗೆದ್ದಾಗ, ನಾವೆಲ್ಲರೂ ವೇದಿಕೆಯ ಮೇಲೆ ಸಂಭ್ರಮಿಸಿದೆವು. ಆ ಕ್ಷಣವನ್ನು ನಾನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಂಡಿರುತ್ತೇನೆ. ಚಿನ್ನವನ್ನು ಗೆದ್ದ ಆ ಭಾವನೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಭಾರತಕ್ಕಾಗಿ, ಐಶ್ವರಿ ಪ್ರತಾಪ್ ಸಿಂಗ್ ತೋಮರ್ ವಿಶ್ವ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ನಾಲ್ಕು ಪದಕಗಳನ್ನು ಗೆದ್ದ ಅತ್ಯಂತ ಯಶಸ್ವಿ ಭಾರತೀಯ ಅಥ್ಲೀಟ್ ಆಗಿದ್ದಾರೆ. ತೋಮರ್ ಪುರುಷರ 10 ಮೀಟರ್ ಏರ್ ರೈಫಲ್ ಮತ್ತು 50 ಮೀಟರ್ ರೈಫಲ್ 3 ಸ್ಥಾನಗಳಲ್ಲಿ ಚಿನ್ನದ ಪದಕಗಳನ್ನು ಗಳಿಸಿದರು, ಜೊತೆಗೆ ಚಿನ್ನ ಗೆದ್ದ ಪುರುಷರ 10 ಮೀಟರ್ ಏರ್ ರೈಫಲ್ ತಂಡದ ಸದಸ್ಯರಾಗಿದ್ದರು. ಪುರುಷರ 50 ಮೀಟರ್ ರೈಫಲ್ ಮೂರು ಸ್ಥಾನಗಳ ತಂಡದಲ್ಲಿ ಅವರು ಕಂಚಿನ ಪದಕವನ್ನು ಪಡೆದರು. (ಪಿಟಿಐ)
ಇದನ್ನೂ ಓದಿ: ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಏಷ್ಯನ್ ರಾಷ್ಟ್ರಗಳ ಪ್ರಾಬಲ್ಯ: ಈ ಸಲದ ವಿಶ್ವಕಪ್ ಯಾರಿಗೆ?