ಫುಟ್ಬಾಲ್ ದಂತಕಥೆ, ಬ್ರೆಜಿಲ್ ದೇಶದ ಪೀಲೆ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಕಳೆದ ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಪೀಲೆ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. 24 ಗಂಟೆಗಳಲ್ಲಿ ಅವರ ಆರೋಗ್ಯ ಸ್ಥಿತಿ ಸುಧಾರಣೆ ಕಂಡಿದೆ ಎಂದು ಆಲ್ಬರ್ಟ್ ಐನ್‌ಸ್ಟೈನ್ ಆಸ್ಪತ್ರೆ ತಿಳಿಸಿದೆ.
'ನನಗೆ ದೇವರಲ್ಲಿ ಬಹಳಷ್ಟು ನಂಬಿಕೆ ಇದೆ. ಪ್ರಪಂಚದಾದ್ಯಂತ ನಾನು ನಿಮ್ಮಿಂದ ಸ್ವೀಕರಿಸುವ ಪ್ರೀತಿಯ ಪ್ರತಿ ಸಂದೇಶವೂ ನನ್ನಲ್ಲಿ ಶಕ್ತಿ ತುಂಬಿಸುತ್ತಿದೆ. ನನಗೆ ಆರೈಕೆ ಮಾಡುತ್ತಿರುವ ವೈದ್ಯಕೀಯ ಮತ್ತು ಶುಶ್ರೂಷಾ ತಂಡಕ್ಕೆ ಧನ್ಯವಾದ ಹೇಳುತ್ತೇನೆ. ವಿಶ್ವಕಪ್‌ನಲ್ಲಿ ಬ್ರೆಜಿಲ್ ತಂಡವನ್ನು ಬೆಂಬಲಿಸಿ' ಎಂದು ಪೀಲೆ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ.
ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಸಂದರ್ಭದಲ್ಲಿ ಪೀಲೆ ಆರೋಗ್ಯಕ್ಕಾಗಿ ಫುಟ್ಬಾಲ್ ಪ್ರೇಮಿಗಳು ಪ್ರಾರ್ಥಿಸುತ್ತಿದ್ದಾರೆ. ಪೀಲೆ ಭಾವಚಿತ್ರವಿರುವ ಬ್ಯಾನರ್‌ಗಳನ್ನು ಹಿಡಿದು ಅಭಿಮಾನಿಗಳು ಪ್ರೀತಿ ತೋರಿಸುತ್ತಿದ್ದಾರೆ. ಬ್ರೆಜಿಲ್ ತಂಡವು ಸೋಮವಾರ ದಕ್ಷಿಣ ಕೊರಿಯಾವನ್ನು 16 ರ ಸುತ್ತಿನಲ್ಲಿ ಎದುರಿಸಲಿದೆ.
ಫುಟ್ಬಾಲ್ ಮಾಂತ್ರಿಕ ಪೀಲೆ ಬ್ರೆಜಿಲ್ ಪರವಾಗಿ 1958, 1962 ಮತ್ತು 1970ರಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದರು. 92 ಪಂದ್ಯಗಳಲ್ಲಿ 77 ಗೋಲುಗಳೊಂದಿಗೆ ತಂಡದ ಸಾರ್ವಕಾಲಿಕ ಪ್ರಮುಖ ಸ್ಕೋರರ್ ಎಂಬ ಶ್ರೇಷ್ಠ ದಾಖಲೆ ಹೊಂದಿದ್ದಾರೆ.
ತೀವ್ರ ಅನಾರೋಗ್ಯ ವರದಿ: ಕರುಳಿನ ಕ್ಯಾನ್ಸರ್ನಿಂದ ಬಳಲುತ್ತಿರುವ ಪೀಲೆ ಅವರ ದೇಹವು ಪರಿಣಾಮಕಾರಿಯಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ವೈದ್ಯರು ಅವರ ಕೀಮೋಥೆರಪಿ ನಿಲ್ಲಿಸಿದ್ದಾರೆ. ಅವರ ಅಂಗಾಂಗಗಳು ಕೆಲಸ ಮಾಡುವುದನ್ನು ನಿಲ್ಲಿಸಿವೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಕುಟುಂಬ ಮೂಲಗಳು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: ಬ್ರೆಜಿಲ್‌ನ ಫುಟ್ಬಾಲ್ ದಿಗ್ಗಜ ಪೀಲೆ ಆಸ್ಪತ್ರೆಯಿಂದ ಡಿಸ್ಚಾರ್ಜ್