ಬೆಂಗಳೂರು: ಪ್ರೊ ಕಬಡ್ಡಿ 8ನೇ ಆವೃತ್ತಿಯ ಅಂತಿಮ ಹಣಾಹಣಿಗೆ ಅಖಾಡ ಸಿದ್ಧಗೊಂಡಿದೆ. ನಿನ್ನೆ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಯುಪಿ ಯೋಧಾ ವಿರುದ್ಧ 3 ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ 38-27 ಅಂಕಗಳ ಅಂತರದಲ್ಲಿ ಗೆದ್ದರೆ, ದಬಾಂಗ್ ಡೆಲ್ಲಿ ತಂಡ ಬೆಂಗಳೂರು ಬುಲ್ಸ್ ವಿರುದ್ಧ 40-35 ಅಂತರದಲ್ಲಿ ಗೆದ್ದು ಫೈನಲ್ ತಲುಪಿತು. ಪ್ರಶಸ್ತಿಗಾಗಿ ಪಾಟ್ನಾ ಪೈರೇಟ್ಸ್ ಮತ್ತು ಡೆಲ್ಲಿ ದಬಾಂಗ್ ಸೆಣಸಾಟ ನಡೆಸಲಿವೆ.
ಮೊದಲ ಸೆಮಿಫೈನಲ್ ಯುಪಿ ಯೋಧಾ ಮತ್ತು ಪಾಟ್ನಾ ಪೈರೇಟ್ಸ್ ಮಧ್ಯೆ ನಡೆದಿದ್ದು, ಪಂದ್ಯದಲ್ಲಿ ಪಾಟ್ನಾ ಪ್ರಾಬಲ್ಯಯುತ ಜಯ ಸಾಧಿಸಿತು. ಯುಪಿ ಯೋಧಾ ತಂಡದ ಸ್ಟಾರ್ ಆಟಗಾರ ಪ್ರದೀಪ್ ನರ್ವಾಲ್ರನ್ನು ಸಂಪೂರ್ಣವಾಗಿ ಕಟ್ಟಿ ಹಾಕಿದ ಪಾಟ್ನಾ ಜಯದ ಕೇಕೆ ಹಾಕಿದೆ. ಪ್ರೊ ಕಬಡ್ಡಿ ಇತಿಹಾಸಲ್ಲಿಯೇ ಯಶಸ್ವಿ ರೈಡರ್ ಆದ ಪ್ರದೀಪ್ ನರ್ವಾಲ್ ಪ್ರಮುಖ ಪಂದ್ಯದಲ್ಲಿ 16 ಬಾರಿ ರೈಡ್ ಮಾಡಿದರೂ ಗಳಿಸಿದ್ದು ಮಾತ್ರ 4 ಪಾಯಿಂಟ್. ಇದು ಯುಪಿ ಯೋಧಾಗೆ ಭಾರಿ ಹಿನ್ನಡೆ ಉಂಟು ಮಾಡಿತು.
ಯುಪಿ ಯೋಧಾ ಪರ ಶ್ರೀಕಾಂತ್ ಜಾಧವ್ 10 ಅಂಕ ಗಳಿಸಿದರೂ ತಂಡ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಮೊಹಮ್ಮದ್ರೇಜಾ ಶಾದ್ಲೌಯಿ ಮತ್ತು ಸುನೀಲ್ ಅವರು ತಲಾ 5 ಅಂಕ ಪಡೆದು ಮಿಂಚಿದರೆ, ಇನ್ನೊಂದು ತುದಿಯಲ್ಲಿ ಪಾಟ್ನಾ ಪೈರೇಟ್ಸ್ ರೈಡರ್‌ಗಳಾದ ಸಚಿನ್ (7) ಮತ್ತು ಗುಮನ್ ಸಿಂಗ್ (8) ಯುಪಿ ಯೋಧಾಗೆ ಕಠಿಣ ಸವಾಲಾದರು.
ಅಂತಿಮವಾಗಿ ಯುಪಿ ಯೋಧಾ ತಂಡ ಪಾಟ್ನಾ ಪೈರೇಟ್ಸ್ ವಿರುದ್ಧ 38-27 ಅಂತರದಲ್ಲಿ ಸೋಲು ಅನುಭವಿಸಿತು. ಇನ್ನು 3 ಬಾರಿಯ ಚಾಂಪಿಯನ್ ಪಾಟ್ನಾ ತಂಡ 4 ನೇ ಬಾರಿಗೆ ಫೈನಲ್ ತಲುಪಿತು.
ಬೆಂಗಳೂರು ಬುಲ್ಸ್ಗೆ ಸೋಲು: ಡೆಲ್ಲಿ ದಬಾಂಗ್ ಮತ್ತು ಬೆಂಗಳೂರು ಬುಲ್ಸ್ ಮಧ್ಯೆ ನಡೆದ ಎರಡನೇ ಸಮಿಫೈನಲ್ ಪಂದ್ಯದಲ್ಲಿ ಬುಲ್ಸ್ ತಂಡದ ನಾಯಕ, ಸ್ಟಾರ್ ಆಟಗಾರ ಪವನ್ ಶೆರಾವತ್ರ ಹೋರಾಟದ ಮಧ್ಯೆಯೂ ತಂಡ ಡೆಲ್ಲಿ ದಬಾಂಗ್ ವಿರುದ್ಧ ಸೋಲು ಕಂಡು ಸೆಮಿಫೈನಲ್ ಹಂತದಲ್ಲೇ ಟೂರ್ನಿಯಿಂದ ಹೊರಬಿತ್ತು. ಪವನ್ ಶೆರಾವತ್ 18 ಅಂಕ ಗಳಿಸಿ ತಂಡಕ್ಕೆ ಬಲ ತುಂಬಿದ್ದರ ಮಧ್ಯೆಯೂ ಡಿಫೆಂಡರ್ಗಳ ತಪ್ಪಿನಿಂದಾಗಿ ತಂಡ ಡೆಲ್ಲಿಗೆ ಶರಣಾಯಿತು.
ಡೆಲ್ಲಿ ದಬಾಂಗ್ನ ರೈಡರ್ ನವೀನ್ 14 ಅಂಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬೆಂಗಳೂರು ತಂಡ ಪ್ರಮುಖ ಘಟ್ಟದಲ್ಲಿ ಎರಡು ಬಾರಿ ಆಲೌಟ್ ಆಗುವ ಮೂಲಕ ಡೆಲ್ಲಿ ತಂಡ ಮುನ್ನಡೆ ಗಳಿಸಲು ಅವಕಾಶ ನೀಡಿ ಪಂದ್ಯ ಸೋಲುವಂತಾಯಿತು.
ಶುಕ್ರವಾರ ಫೈನಲ್ ಪಂದ್ಯ: ಪಾಟ್ನಾ ಪೈರೇಟ್ಸ್ ಮತ್ತು ಡೆಲ್ಲಿ ದಬಾಂಗ್ ಮಧ್ಯೆ ಫೈನಲ್ ಪಂದ್ಯ ಶುಕ್ರವಾರ ರಾತ್ರಿ 8.30ಕ್ಕೆ ನಡೆಯಲಿದೆ. ನಾಲ್ಕನೇ ಬಾರಿಗೆ ಪಾಟ್ನಾ ಚಾಂಪಿಯನ್ ಆಗಲು ಹವಣಿಸುತ್ತಿದ್ದರೆ, ಡೆಲ್ಲಿ ದಬಾಂಗ್ ತಂಡ ಸತತ ಎರಡನೇ ಬಾರಿ ಫೈನಲ್ ಪ್ರವೇಶಿಸಿದ್ದು, ಮೊದಲ ಬಾರಿ ಚಾಂಪಿಯನ್ ಆಗುವ ನಿರೀಕ್ಷೆ ಇಟ್ಟುಕೊಂಡಿದೆ.
ಇದನ್ನೂ ಓದಿ: ರೋಹಿತ್ ಶರ್ಮಾ ಮತ್ತು ಪೊಲಾರ್ಡ್ ಅವರೊಂದಿಗೆ ಆಟವಾಡಲು ಉತ್ಸುಕನಾಗಿದ್ದೇನೆ: ಟಿಮ್ ಡೇವಿಡ್