ಲೌಸನ್ನೆ(ಸ್ವಿಟ್ಜರ್ಲ್ಯಾಂಡ್): ಒಲಿಂಪಿಕ್ನಲ್ಲಿ ಮೂರು ಚಿನ್ನದ ಪದಕ ಜಯಿಸಿದ್ದ ಈಜು ಪಟು ಸನ್ ಯಾಂಗ್ ಅವರಿಗೆ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ (ಸಿಎಎಸ್) ಎಂಟು ವರ್ಷಗಳ ಕಾಲ ನಿಷೇಧ ವಿಧಿಸಿದೆ.
2018ರ ಸೆಪ್ಟೆಂಬರ್ನಲ್ಲಿ ಪರೀಕ್ಷಕರಿಗೆ ರಕ್ತ ಮತ್ತು ಯೂರಿನ್ ಮಾದರಿ ನೀಡಲು ಸನ್ ಯಾಂಗ್ ನಿರಾಕರಿಸಿದ್ದರು. ಡೋಪಿಂಗ್ ಪರೀಕ್ಷೆಯನ್ನು ಪದೇಪದೆ ತಪ್ಪಿಸಿಕೊಂಡ ಕಾರಣಕ್ಕೆ ಯಂಗ್ ನಿಷೇಧಕ್ಕೆ ಗುರಿಯಾಗಿದ್ದಾರೆ.
ಸೆಪ್ಟಂಬರ್‌ನಲ್ಲಿ ಡೋಪಿಂಗ್ ಪರೀಕ್ಷೆಯ ವೇಳೆ ತಪ್ಪು ಮಾಡಿದ್ದ ಸನ್‌ಗೆ ಸ್ವಿಮ್ಮಿಂಗ್ ಆಡಳಿತ ಮಂಡಳಿ ಫಿನಾ ಕ್ಲೀನ್‌ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ ವಿಶ್ವ ಉದ್ದೀಪನ ಮದ್ದು ನಿಗ್ರಹ ಘಟಕ(ವಾಡಾ), ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ (ಸಿಎಎಸ್) ಮೊರೆ ಹೋಗಿತ್ತು.
ಸನ್ ಯಾಂಗ್ ಡೋಪಿಂಗ್ ಪರೀಕ್ಷೆಯಿಂದ ತಪ್ಪಿಸಿಕೊಂಡಿರುವುದನ್ನು ಸಿಎಎಸ್ ಸದಸ್ಯರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ. ಅವರ ಹಿಂದಿನ ಡೋಪಿಂಗ್ ನಿಷೇಧವನ್ನು ಗಣನೆಗೆ ತೆಗೆದುಕೊಂಡು ಎಂಟು ವರ್ಷಗಳ ನಿಷೇಧ ಹೇರಲಾಗಿದೆ ಎಂದು ತಿಳಿಸಿದೆ. ಸಿಎಎಸ್ ತೀರ್ಪು ಸ್ವಾಗತಿಸಿರುವ ವಾಡಾ ಇದೊಂದು ಗಮನಾರ್ಹ ಫಲಿತಾಂಶ ಎಂದಿದೆ.
28 ವರ್ಷದ ಚೀನಾದ ಸನ್ ಯಾಂಗ್ 2014ರಲ್ಲಿ ಡೋಪಿಂಗ್ ಪರೀಕ್ಷೆಗೆ ಸಂಬಂಧಿಸಿದಂತೆ ನಿಷೇಧಕ್ಕೆ ಒಳಗಾಗಿದ್ದರು. 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಎರಡು ಚಿನ್ನ ಗೆದ್ದಿದ್ದ ಸನ್ ಯಾಂಗ್, 2016ರಲ್ಲಿ ರಿಯೋ ಒಲಿಂಪಿಕ್ಸ್ನಲ್ಲೂ ಚಿನ್ನದ ಪದಕ ಗೆದ್ದುಕೊಂಡಿದ್ದರು.