ಸಾವೊ ಪಾಲೊ (ಬ್ರೆಜಿಲ್): ಫುಟ್ಬಾಲ್ ಆಟಗಾರ ನೇಮಾರ್ ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ. ಶುಕ್ರವಾರ ಅಮೆಜಾನ್ ನಗರದ ಬೆಲ್ಮ್‌ನಲ್ಲಿ ಬೊಲಿವಿಯಾ ವಿರುದ್ಧದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ 61 ನೇ ನಿಮಿಷದಲ್ಲಿ 78ನೇ ಗೋಲ್ಗಳಿಸಿ ನೇಮಾರ್ ಮೂರು ಬಾರಿ ವಿಶ್ವಕಪ್ ವಿಜೇತರಾಗಿದ್ದ ಪೀಲೆ ಅವರ ದಾಖಲೆಯನ್ನೇ ಮುರಿದಿದ್ದಾರೆ. ಈ ಮೂಲಕ ನೇಮಾರ್ ಬ್ರೆಜಿಲ್ ರಾಷ್ಟ್ರೀಯ ತಂಡದ ಅಗ್ರ ಗೋಲ್ ಸ್ಕೋರರ್ ಎನಿಸಿಕೊಂಡಿದ್ದಾರೆ. 5-1 ಅಂತರದಲ್ಲಿ ಬ್ರೆಜಿಲ್ ಗೆಲುವು ಕಂಡಿದೆ.
ಬೊಲಿವಿಯಾ ವಿರುದ್ಧದ ಪಂದ್ಯದಲ್ಲಿ ನೇಮಾರ್ 61ನೇ ನಿಮಿಷದಲ್ಲಿ ಐತಿಹಾಸಿಕ ಗೋಲು ದಾಖಲಿಸಿದರು. ಇದು ಬ್ರೆಜಿಲ್‌ಗೆ ಪಂದ್ಯದಲ್ಲಿ ನಾಲ್ಕನೇ ಗೋಲು ಆಗಿತ್ತು. ಪಂದ್ಯದ 17 ನೇ ನಿಮಿಷದಲ್ಲಿ, ನೇಮಾರ್ ಪೆನಾಲ್ಟಿಯನ್ನು ತಪ್ಪಿಸಿಕೊಂಡರು. ಅದನ್ನು ಬೊಲಿವಿಯನ್ ಗೋಲ್ ಕೀಪರ್ ಬಿಲ್ಲಿ ವಿಸ್ಕಾರ ಅವರು ಚಾಣಾಕ್ಷತನದಿಂದ ಉಳಿಸಿಕೊಂಡರು. ಈ ಪೆನಾಲ್ಟಿ ಮೂಲಕ ಅವರು ಈಗಾಗಲೇ ಪೀಲೆಯವರ ದಾಖಲೆಯನ್ನು ತಮ್ಮದಾಗಿಸಿಕೊಳ್ಳಬಹುದಿತ್ತು.
ಬ್ರೆಜಿಲ್ ಪರ ಇದುವರೆಗೆ ನೇಮಾರ್ ಜೂನಿಯರ್ ಮತ್ತು ದಿಗ್ಗಜ ಪೀಲೆ ಮಾತ್ರ 70 ಗೋಲುಗಳ ಗಡಿ ದಾಟಿದ್ದಾರೆ. ಇದನ್ನು ಬಿಟ್ಟರೆ ಬೇರೆ ಯಾವ ಆಟಗಾರರಿಗೂ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಇದೀಗ ಪೀಲೆ ಅವರ ದಾಖಲೆಯನ್ನು ನೇಮಾರ್ ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಗಾಯದಿಂದ ಹಿಂತಿರುಗಿದ ನಂತರ ನೇಮಾರ್ ಈ ದೊಡ್ಡ ಸಾಧನೆಯನ್ನು ಸಾಧಿಸಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಅವರು ಪಾದದ ಗಾಯದಿಂದ ಬಳಲುತ್ತಿದ್ದರು. ಈ ಹಿಂದೆ, ನೇಮಾರ್ 2022 ರಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ಬ್ರೆಜಿಲ್‌ಗಾಗಿ ಆಡುತ್ತಿದ್ದರು.
ಬೊಲಿವಿಯಾ ವಿರುದ್ಧದ ಪಂದ್ಯದಲ್ಲಿ ಬ್ರೆಜಿಲ್‌ಗೆ ಜಯ: ಬ್ರೆಜಿಲ್ ಮತ್ತು ಬೊಲಿವಿಯಾ ನಡುವೆ ನಡೆದ ಪಂದ್ಯದಲ್ಲಿ ಬ್ರೆಜಿಲ್ 5-1 ಗೋಲುಗಳಿಂದ ಗೆದ್ದುಕೊಂಡಿರುವುದು ಗಮನಾರ್ಹ. ನೇಮಾರ್ ಈ ಪಂದ್ಯದಲ್ಲಿ ಒಂದಲ್ಲ 2 ಗೋಲುಗಳನ್ನು ಬಾರಿಸಿದ್ದರು. ಈಗ ಅವರ ಹೆಸರಿನಲ್ಲಿ 79 ಅಂತಾರಾಷ್ಟ್ರೀಯ ಗೋಲುಗಳು ದಾಖಲಾಗಿವೆ.
ನನ್ನ ಬಳಿ ಪದಗಳೇ ಇಲ್ಲ: ಪಂದ್ಯದ ನಂತರ ಮಾತನಾಡಿದ ನೇಮಾರ್, ನನಗೆ ತುಂಬಾ ಸಂತೋಷವಾಗಿದೆ. ಈ ದಾಖಲೆ ಮುರಿದಿದ್ದಕ್ಕೆ ವರ್ಣಿಸಲು ನನ್ನ ಬಳಿ ಪದಗಳಿಲ್ಲ. ನಾನು ಈ ದಾಖಲೆಯನ್ನು ತಲುಪುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ ಎಂದು ನೇಮಾರ್ ಸಂತಸ ಹಂಚಿಕೊಂಡಿದ್ದಾರೆ.
31 ವರ್ಷದ ಬ್ರೆಜಿಲಿಯನ್ ಸ್ಟಾರ್ ನೇಮರ್ ಕಳೆದ ತಿಂಗಳು ಪ್ಯಾರಿಸ್ ಸೇಂಟ್-ಜರ್ಮನ್ ಕ್ಲಬ್ ತೊರೆದು ಸೌದಿ ಅರೇಬಿಯಾದ ಫುಟ್ಬಾಲ್ ಕ್ಲಬ್ ಅಲ್-ಹಿಲಾಲ್ ಸೇರಿಕೊಂಡರು. ಶ್ರೇಷ್ಠ ಫುಟ್ಬಾಲ್ ಆಟಗಾರ ಎಂದು ಪರಿಗಣಿಸಲ್ಪಟ್ಟ ಪೀಲೆ, 1957 ಮತ್ತು 1971 ರ ನಡುವೆ ಬ್ರೆಜಿಲ್‌ಗಾಗಿ 92 ಪಂದ್ಯಗಳನ್ನು ಆಡಿ, 77 ಗೋಲುಗಳನ್ನು ಗಳಿಸಿದ್ದರು. 82 ವರ್ಷದ ಪೀಲೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಿಧನರಾದರು. ಬ್ರೆಜಿಲಿಯನ್ ಫುಟ್‌ಬಾಲ್ ಕಾನ್ಫಿಡರೇಶನ್ 114 ಪಂದ್ಯಗಳಲ್ಲಿ 95 ಗೋಲುಗಳೊಂದಿಗೆ ಪೀಲೆಯನ್ನು ತನ್ನ ಅಗ್ರ ಗೋಲ್ ಸ್ಕೋರರ್ ಎಂದು ಪರಿಗಣಿಸುತ್ತದೆ. ಆದರೆ ಕ್ಲಬ್‌ಗಳ ವಿರುದ್ಧ ಬ್ರೆಜಿಲ್ ತಂಡದ ಸೌಹಾರ್ದ ಪಂದ್ಯಗಳಲ್ಲಿ ಪೀಲೆ ಗಳಿಸಿದ ಗೋಲುಗಳನ್ನು ಫಿಫಾ ಲೆಕ್ಕಿಸುವುದಿಲ್ಲ.
ಇದನ್ನೂ ಓದಿ: Asia Cup 2023: ಮತ್ತೆ ಏಷ್ಯಾಕಪ್ ತಂಡ ಸೇರಿದ ಬುಮ್ರಾ.. ಪಾಕಿಸ್ತಾನ ಪಂದ್ಯಕ್ಕೆ ಇವರೇ ಕೀ ಬೌಲರ್