ಹೈದರಾಬಾದ್: ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ 88.17 ಮೀಟರ್ ದೂರ ಜಾವೆಲಿನ್ ಎಸೆದು ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದುಕೊಂಡರು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಅರ್ಹತಾ ಹಂತದಲ್ಲಿ 88.77 ಮೀಟರ್ ಎಸೆದು ಫೈನಲ್ಗೆ ಮತ್ತು 2024ರ ಪ್ಯಾರಿಸ್ ಒಲಂಪಿಕ್ಸ್ಗೂ ಸ್ಥಾನವನ್ನು ಗೋಲ್ಡನ್ ಬಾಯ್ ಚೋಪ್ರಾ ಗಳಿಸಿದ್ದಾರೆ.
ಸೋಮವಾರ ನಸುಕಿನ ವೇಳೆಯಲ್ಲಿ ವಿಶ್ವ ಅಥ್ಲೆಟಿಕ್ಸ್ನಲ್ಲಿ ಪದಕ ಗೆದ್ದು ಭಾರತಕ್ಕೆ ಮೊದಲ ಬಂಗಾರ ತಂದುಕೊಟ್ಟು ಸಾಧಗೈದು ತಮ್ಮ ಹೆಸರನ್ನು ದಾಖಲಿಸಿದರು. ವಿಶ್ವ ಅಥ್ಲೆಟಿಕ್ಸ್ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯನ್ನು ಹಾಲಿ ಒಲಿಂಪಿಕ್ ಚಾಂಪಿಯನ್ ನೀರಜ್ ಪಡೆದರು. ಈವರ ಈ ಸಾಧನೆಗೆ ಸಾವಿರ ಪಟ್ಟು ಸಂತೋಷಪಟ್ಟಿದ್ದು 43 ವರ್ಷದ ಕಾಶಿನಾಥ್ ನಾಯ್ಕ್. ಗೋಲ್ಡನ್ ಬಾಯ್, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ನೀರಜ್ಗೆ ಕರ್ನಾಟಕದವರಾದ ಉತ್ತರ ಕನ್ನಡ ಜಿಲ್ಲೆಯ ಕಾಶಿನಾಥ್ ನಾಯ್ಕ್ ಪ್ರತಿಷ್ಠಿತ ಪುಣೆ ಮೂಲದ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ನೀಡಿದ್ದಾರೆ.
ಕಾಶಿನಾಥ್ ನಾಯ್ಕ್ ಅವರು ನೀರಜ್ ಅವರನ್ನು ಅವರ ಬಾಲ್ಯದ ದಿನಗಳಿಂದ ನೋಡಿದ್ದಾರೆ. "ನಾನು 2015 ರಿಂದ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ ಮತ್ತು ನೀರಜ್ ತಮ್ಮ ಆತ್ಮವಿಶ್ವಾಸದಿಂದಾಗಿ ವಿಜಯಶಾಲಿಯಾಗಿದ್ದಾರೆ" ಎಂದು 2013 ರಿಂದ 2018 ರ ವರೆಗೆ ಏಷ್ಯನ್ ಗೇಮ್ಸ್‌ಗೆ ಭಾರತೀಯ ಅಥ್ಲೆಟಿಕ್ಸ್ ತಂಡದ ಕೋಚ್ ಆಗಿದ್ದ ಕಾಶಿನಾಥ್ ನಾಯ್ಕ್ ಫೋನ್ ಮೂಲಕ ಈಟಿವಿ ಭಾರತಕ್ಕೆ ತಿಳಿಸಿದರು.
2010 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತ ಕಾಶಿನಾಥ್ ನಾಯಕ್ ಪ್ರಕಾರ, ನೀರಜ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನವನ್ನು ಗೆಲ್ಲಲು ಬಯಸಿದ್ದರು, ಅವರಿಗೆ ಅದು ಒಂದು ಗೆಲ್ಲಲು ಬಾಕಿ ಇದೆ ಎಂಬ ಕೊರಗಿತ್ತು ಎಂದಿದ್ದಾರೆ. "ನೀರಜ್ ಪೋಲೆಂಡ್‌ನಲ್ಲಿ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದಿದ್ದರು. ನಂತರ ಅವರು 2018 ರ ಕಾಮನ್‌ವೆಲ್ತ್ ಗೇಮ್ಸ್, 2018 ಇಂಡೋನೇಷ್ಯಾ ಏಷ್ಯನ್ ಗೇಮ್ಸ್, 2020 ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದರು ಮತ್ತು ಡೈಮಂಡ್ ಲೀಗ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಕೇವಲ ವಿಶ್ವ ಚಾಂಪಿಯನ್‌ಶಿಪ್ ಚಿನ್ನ ಪದಕ ಬಾಕಿ ಇತ್ತು, ಈಗ ಅದನ್ನು ಗೆಲ್ಲುವುದು ಅವರ ಕನಸಾಗಿತ್ತು. ಅವರ ಕನಸು ಅಂತಿಮವಾಗಿ ಈಡೇರಿದೆ" ಎಂದು ಹೇಳಿದ್ದಾರೆ.
ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಂಪಿಕ್ಸ್ನಲ್ಲಿ ಹರಿಯಾಣ ಮೂಲದ ನೀರಜ್ ಚೋಪ್ರಾ ಮತ್ತೊಂದು ಒಲಿಂಪಿಕ್ಸ್ ಪದಕವನ್ನು ಮುಡಿಗೇರಿಸಿಕೊಳ್ಳಲಿದ್ದಾರೆ ಎಂದು ಕಾಶಿನಾಥ್ ನಾಯ್ಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2016ರಲ್ಲಿ ಭಾರತೀಯ ಅಥ್ಲೆಟಿಕ್ಸ್ ತಂಡದ ಸಹಾಯಕ ಕೋಚ್ ಆಗಿ ನಾಯಕ್ ಕಾರ್ಯನಿರ್ವಹಿಸಿದ್ದರು.
ಕಾಶಿನಾಥ್ ನಾಯ್ಕ್ ಅವರ ಮುಖದಲ್ಲಿ ಮಂದಹಾಸಕ್ಕೆ ಇನ್ನೊಂದು ಕಾರಣವೂ ಇದೆ. ಅದೇನೆಂದರೆ, ಕರ್ನಾಟಕದ ಡಿಪಿ ಮನು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ 84.14 ಮೀಟರ್ ದೂರ ಎಸೆದು, 6ನೇ ಸ್ಥಾನವನ್ನು ಪಡೆದುಕೊಂಡರು.
ಇದನ್ನೂ ಓದಿ: Neeraj Chopra: ಮಗನ ಸಾಧನೆಯ ಹಿಂದೆ ಅವಿಭಕ್ತ ಕುಟುಂಬದ ನಂಟಿದೆ.. ನೀರಜ್ ಅವರ ತಂದೆ ಸತೀಶ್ ಚೋಪ್ರಾ