ಒರೆಗನ್(ಅಮೆರಿಕ): "ಚಾಂಪಿಯನ್‌ಶಿಪ್‌ನಲ್ಲಿ ನಾನು ಉತ್ತಮ ಪ್ರದರ್ಶನ ನೀಡುತ್ತೇನೆ ಎಂಬ ವಿಶ್ವಾಸವಿತ್ತು. ಫಲಿತಾಂಶದಿಂದ ನಾನು ತೃಪ್ತನಾಗಿದ್ದೇನೆ. ನನ್ನ ದೇಶಕ್ಕಾಗಿ ಪದಕ ಗೆದ್ದಿರುವುದು ತುಂಬಾ ಸಂತೋಷ ನೀಡಿದೆ" ಎಂದು ನೀರಜ್ ಚೋಪ್ರಾ ಹೇಳಿದರು.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಇಂದು ಬೆಳ್ಳಿ ಪದಕ ಗೆದ್ದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಅವರು, "ಇವತ್ತು ವಾತಾವರಣ ಉತ್ತಮವಾಗಿರಲಿಲ್ಲ. ಗಾಳಿಯ ವೇಗ ಹೆಚ್ಚಾಗಿತ್ತು. ಈ ಮಧ್ಯೆಯೂ ಉತ್ತಮ ಫಲಿತಾಂಶ ನಿರೀಕ್ಷಿಸಿದ್ದೆ. ಆಂಡರ್ಸನ್ ಅವರು 90 ಮೀಟರ್ ದೂರ ಜಾವೆಲಿನ್ ಎಸೆದಾಗ ನಾನು ಇದನ್ನು ಮೀರಬೇಕು ಎಂದು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ಆಂಡರ್ಸನ್ ಈ ವರ್ಷ ಮುಂಚೂಣಿಯಲ್ಲಿದ್ದಾರೆ. 90 ಮೀಟರ್‌ಗಿಂತ ಹೆಚ್ಚಿನ ಉತ್ತಮ ಎಸೆತಗಳನ್ನು ಎಸೆದಿದ್ದಾರೆ. ಅವರು ಹೆಚ್ಚು ಶ್ರಮಿಸಿರುವುದು ಗೊತ್ತಾಗುತ್ತದೆ. ಇದು ನನಗೂ ಒಳ್ಳೆಯ ಪಾಠ. ನನಗೆ ಉತ್ತಮ ಸ್ಪರ್ಧಾಳು ಇದ್ದಾರೆ" ಎಂದರು.
"ಈ ಬಾರಿ ಸ್ಪರ್ಧೆ ಕಠಿಣವಾಗಿತ್ತು. ಪ್ರತಿಸ್ಪರ್ಧಿಗಳು ಉತ್ತಮವಾಗಿ ಜಾವೆಲಿನ್ ಎಸೆಯುತ್ತಿದ್ದರು. ಕ್ರೀಡಾಕೂಟದಲ್ಲಿ 2ನೇ ಸ್ಥಾನ ಪಡೆದಿರುವುದು ಕಡಿಮೆಯೇನಲ್ಲ. ಚಿನ್ನದ ಬೇಟೆ ಮುಂದುವರಿಯಲಿದೆ. ಪ್ರತಿ ಬಾರಿಯೂ ಚಿನ್ನವನ್ನು ಪಡೆಯಲು ಸಾಧ್ಯವಿಲ್ಲ ಎಂಬುದು ನನಗೂ ಗೊತ್ತಿದೆ. ಆದರೂ ಸಾಧ್ಯತೆ ಮೀರಿ ಪ್ರಯತ್ನಿಸುತ್ತೇನೆ. ಇನ್ನೂ ಹೆಚ್ಚಿನ ತರಬೇತಿ ಪಡೆದು ಮುಂದಿನ ಬಾರಿ ಪದಕದ ಬಣ್ಣ ಬದಲಿಸಲು ಪ್ರಯತ್ನಿಸುತ್ತೇನೆ" ಎಂದು ನೀರಜ್ ಹೇಳಿದರು.
ಇದನ್ನೂ ಓದಿ: ನೀರಜ್ ಚೋಪ್ರಾ 'ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಕ್ರೀಡಾಪಟು': ಅಂಜು ಬಾಬಿ ಜಾರ್ಜ್