ಹೈದರಾಬಾದ್: ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಾರಂಭ ಇದೇ ಮೊದಲ ಬಾರಿಗೆ ವರ್ಚುವಲ್ ಮಾದರಿಯಲ್ಲಿ ಜರಗುತ್ತಿದೆ.
ಕೋವಿಡ್-19 ಭೀತಿಯಿಂದ ರಾಷ್ಟ್ರಪತಿ ಭವನದಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆಯಬೇಕಿದ್ದ ರಾಷ್ಟ್ರೀಯ ಪ್ರಶಸ್ತಿ ಸಮಾರಂಭ ಇದೇ ಮೊದಲ ಬಾರಿಗೆ ವರ್ಚುವಲ್ ಕಾರ್ಯಕ್ರಮದಲ್ಲಿ ನಡೆಯುತ್ತಿದೆ. ಈ ವೇಳೆ 5 ರಾಜೀವ್ ಗಾಂಧಿ ಖೇಲ್ ರತ್ನ ಸಹಿತ ಅರ್ಜುನ ಪ್ರಶಸ್ತಿ, ಧ್ಯಾನ್ಚಂದ್ ಹಾಗೂ ದ್ರೋಣಾಚಾರ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ.
ಭಾರತ ಕ್ರೀಡಾ ಇಲಾಖೆ ನೀಡುವ ಈ ಅತ್ಯುನ್ನತ ಪ್ರಶಸ್ತಿಗಳಿಗೆ 74 ಮಂದಿ ಭಾಜನರಾಗಿದ್ದಾರೆ. ಎಲ್ಲರಿಗೂ ಇಂದು ಬೆಳಿಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವರ್ಚುವಲ್ ಆಗಿ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಆದರೆ ಕೊರೊನಾ ಸೇರಿದಂತೆ ವಿವಿಧ ಕಾರಣಗಳಿಂದ 14 ಮಂದಿ ಕ್ರೀಡಾಪಟುಗಳು ಪ್ರಶಸ್ತಿ ಸಮಾರಂಭದಿಂದ ಹೊರಗುಳಿದಿದ್ದಾರೆ ಎಂದು ತಿಳಿದು ಬಂದಿದೆ.
ಹಾಕಿ ದಂತಕತೆ ಧ್ಯಾನ್ಚಂದ್ ಅವರ ಜನ್ಮದಿನದಂದು ರಾಷ್ಟ್ರಪತಿ ಭವನದಲ್ಲಿ ಕ್ರೀಡಾಪ್ರಶಸ್ತಿಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸಂಪ್ರಾಯದಂತೆ ಪ್ರಶಸ್ತಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ 19 ಭೀತಿಯಿಂದ ಈ ಪ್ರಶಸ್ತಿ ಸಮಾರಂಭವನ್ನು ಆನ್ಲೈನ್ ಕಾರ್ಯಕ್ರಮದ ಮೂಲಕ ನಡೆಸಲಾಗುತ್ತಿದೆ.
ಇದಕ್ಕಾಗಿ ಬೆಂಗಳೂರು, ಪುಣೆ, ಸೋನೆಪೇಟ್, ಚಂಡೀಗಡ್, ಕೋಲ್ಕತ್ತಾ, ಲಕ್ನೋ, ದೆಹಲಿ, ಮುಂಬೈ, ಭೂಪಾಲ್, ಹೈದರಾಬಾದ್ ಮತ್ತು ಇಟಾನಗರದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಎಲ್ಲಾ ಕ್ರೀಡಾಪಟುಗಳು ತಮ್ಮ ಪ್ರಶಸ್ತಿ ಹಾಗೂ ಪ್ರಮಾಣ ಪತ್ರವನ್ನು ಈ ಸ್ಥಳಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವೀಕರಿಸಿಲಿದ್ದಾರೆ.