ನವದೆಹಲಿ: ಏಷ್ಯನ್ ಗೇಮ್ಸ್ನ ಬೆಳ್ಳಿ ಪದಕ ವಿಜೇತ ಸುಮಿತ್ ಸಂಗ್ವಾನ್ ಅವರ ನಿಷೇಧವನ್ನು ನಾಡಾ ಹಿಂತೆಗೆದುಕೊಂಡಿದ್ದು, ಅವರ ಒಲಿಂಪಿಕ್ಸ್ ಭಾಗವಹಿಸುವಿಕೆಗೆ ಗ್ರೀನ್ಸ್ ಸಿಗ್ನಲ್ ನೀಡಿದೆ.
ಕಳೆದ ಡಿಸೆಂಬರ್ನಲ್ಲಿ ನಿಷೇಧಿತ ವಸ್ತು ಸೇವಿಸಿ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾದ ಕಾರಣ, ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ (ನಾಡಾ) ಸುಮಿತ್ ಸಂಗ್ವಾನ್ಗೆ ಡಿಸೆಂಬರ್ 26 ರಂದು ಜಾರಿಗೆ ಬರುವಂತೆ ಒಂದು ವರ್ಷದ ನಿಷೇಧ ಹೇರಿತ್ತು.
ಆದರೆ ಸುಮಿತ್ ವಿಚಾರಣೆ ವೇಳೆ ತಾವೂ ನಿಷೇಧಿತ ಡ್ರಗ್ ತೆಗೆದುಕೊಂಡಿದ್ದ ಉದ್ದೇಶಪೂರ್ವಕದಿಂದಲ್ಲ ಎಂದು ಸಾಬೀತು ಮಾಡಿದ್ದರಿಂದ ಅವರ ನಿಷೇಧವನ್ನು ನಾಡಾ ಹಿಂತೆಗೆದುಕೊಂಡಿದೆ. ಇದೀಗ 2012ರ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದ ಸುಮಿತ್ 2020ರ ಟೋಕಿಯೋ ಒಲಿಂಪಿಕ್ಸ್ನಲ್ಲೂ ಭಾಗವಹಿಸಲು ರಹದಾರಿ ಸಿಕ್ಕಂತಾಗಿದೆ.
ನಾಡಾ ತಮ್ಮ ಮೇಲಿನ ನಿಷೇಧವನ್ನು ಹಿಂತೆಗೆದುಕೊಂಡಿದ್ದಕ್ಕೆ ಸಂತೋಷ ವ್ಯಕ್ತಪಡಿಸಿರುವ ಸುಮಿತ್, ಇಂತಹ ಸಂಕಷ್ಟದ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತ ಕುಟುಂಬವರನ್ನು ಸ್ಮರಿಸಿಕೊಂಡಿದ್ದಾರೆ.
ನಾನು ಈ ಸಂದರ್ಭಗಳಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದೇನೆ. ಆದರೆ ಇದನ್ನೆಲ್ಲಾ ಸಕಾರಾತ್ಮಕ ರೀತಿಯಲ್ಲೇ ತೆಗೆದುಕೊಂಡಿದ್ದೆ. ಏಕೆಂದರೆ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ನನಗೆ ತಿಳಿದಿತ್ತು. ಇಂತಹ ಕಠಿಣ ಸಮಯದಲ್ಲಿ ಕುಟುಂಬ ನನ್ನನ್ನು ಬೆಂಬಲಿಸಿತು ಮತ್ತು ಅವರ ಸಹಾಯದಿಂದಲೇ ನಾನು ಆ ಎಲ್ಲ ವಿಷಯಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಯಿತು" ಎಂದು ಸಂಗ್ವಾನ್ ತಿಳಿಸಿದ್ದಾರೆ.