ನವದೆಹಲಿ : ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ ಅವರ ತರಬೇತುದಾರ ಜರ್ಮನಿಯ ಉವೆ ಹಾನ್ ಅವರನ್ನು ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ ವಜಾ ಮಾಡಿದೆ. 2017ರಲ್ಲಿ ನೀರಜ್ ಚೋಪ್ರಾಗೆ ತರಬೇತುದಾರರನ್ನಾಗಿ ಯುವೆ ಹಾನ್ ಅವರನ್ನು ಎಎಫ್‌ಐ ನೇಮಿಸಿತ್ತು. ಹಾನ್ ದೇಶದ ಕ್ರೀಡಾ ವ್ಯವಸ್ಥೆಯ ವಿರುದ್ಧ ಟೀಕೆ ಮಾಡಿದ್ದರು ಎನ್ನಲಾಗಿದೆ.
59 ವರ್ಷದ ಹಾನ್ ಜಾವೆಲಿನ್‌ನಲ್ಲಿ 100 ಮೀಟರ್ ಎಸೆದ ಏಕೈಕ ಕ್ರೀಡಾಪಟು. 2018ರಲ್ಲಿ ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳನ್ನು ಗೆದ್ದಾಗ ಚೋಪ್ರಾ ಅವರಿಗೆ ಹಾನ್ ತರಬೇತುದಾರರಾಗಿದ್ದರು. ಟೋಕಿಯೊ ಒಲಿಂಪಿಕ್ಸ್‌ಗಾಗಿ ರಾಷ್ಟ್ರೀಯ ಜಾವೆಲಿನ್ ತರಬೇತುದಾರರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದರು.
ಎಎಫ್‌ಐ ಅಧ್ಯಕ್ಷ ಆದಿಲ್ಲೆ ಸುಮರಿವಾಲಾ ಈ ಬಗ್ಗೆ ಮಾಹಿತಿ ನೀಡಿದ್ದರು. ಎರಡು ದಿನಗಳ ಕಾರ್ಯನಿರ್ವಾಹಕ ಮಂಡಳಿ ಸಭೆಯಲ್ಲಿ ಕ್ರೀಡಾಪಟುಗಳು ಮತ್ತು ತರಬೇತುದಾರರ ಕಾರ್ಯಕ್ಷಮತೆಯ ಪರಿಶೀಲನೆಯ ನಂತರ ಹಾನ್ ಅವರನ್ನು ವಜಾ ಮಾಡಲಾಗಿದೆ ಎಂದು ಹೇಳಿದರು.
ಚೋಪ್ರಾ ಅವರು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಾಗ ಅವರಿಗೆ ತರಬೇತಿ ನೀಡಿದ್ದ ಬಯೋಮೆಕಾನಿಕಲ್ ತಜ್ಞ ಕ್ಲಾಸ್ ಬಾರ್ಟೋನಿಯೆಟ್ಜ್ ಅವರು ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಹಾನ್ ಅವರ ಕಾರ್ಯಕ್ಷಮತೆ ಉತ್ತಮವಾಗಿರಲಿಲ್ಲ. ಹೀಗಾಗಿ, ಅವರನ್ನು ಬದಲಾಯಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇಬ್ಬರು ನೂತನ ತರಬೇತುದಾರರನ್ನು ತರುತ್ತೇವೆ ಎಂದಿದ್ದಾರೆ.