ಚಂಡೀಗಢ: ಭಾರತದ ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್(91) 2021ರ ಜೂನ್ 18 ರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ 'ಫ್ಲೈಯಿಂಗ್ ಸಿಖ್' ಖ್ಯಾತಿಯ ಮಿಲ್ಖಾ ಸಿಂಗ್ ಮೃತಪಟ್ಟಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ದೇಶಕ್ಕೆ ಮೊದಲ ಚಿನ್ನ ಗೆದ್ದು ಕೊಟ್ಟ ಸಾಧಕರ ನಿಧನಕ್ಕೆ ದೇಶದ ನಾನಾ ಮೂಲೆಗಳಿಂದ ಸಂತಾಪ ವ್ಯಕ್ತವಾಗಿದೆ.
ಆಪ್ತನನ್ನು ಕಳೆದುಕೊಂಡ ಸ್ನೇಹ, ಅಭಿಮಾನಿ ಬಳಗ ಶೋಕ ಸಾಗರದಲ್ಲಿ ಮುಳುಗಿದೆ. ಮಿಲ್ಖಾಸಿಂಗ್ ಸ್ನೇಹಿತ ಕೇದಾರನಾಥ ಶರ್ಮಾ ಅವರು ತಮ್ಮ ಆತ್ಮೀಯ ಗೆಳೆಯನ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಟಿವಿ ಭಾರತದ ಜತೆ ಹಂಚಿಕೊಂಡಿದ್ದಾರೆ.
‘ಗುರಿ ತಲುಪುವುದಷ್ಟೇ ಅವನ ಗುರಿ’
‘ಮಿಲ್ಖಾ ಈ ಜಗತ್ತಿನಲ್ಲಿಲ್ಲ ಎಂಬುದನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ತನ್ನ ಎಲ್ಲ ನೋವು ನಲಿವುಗಳನ್ನು ನನ್ನ ಬಳಿ ಹಂಚಿಕೊಳ್ತಿದ್ದ. ಅವನು ಓಡುವಾಗ ಏನನ್ನೂ ನೋಡುತ್ತಿರಲಿಲ್ಲ. ಗುರಿ ತಲುಪುವುದಷ್ಟೇ ಅವನ ಮುಖ್ಯ ಧ್ಯೇಯವಾಗಿತ್ತು. ಅಲ್ಲದೇ, ಮಿಲ್ಖಾ ನನ್ನ ಇಡೀ ಜೀವಮಾನವನ್ನೇ ಓಟಕ್ಕಾಗಿ ಮೀಸಲಿಡುತ್ತೇನೆ ಎಂದಿದ್ದರು ಎಂದು ತಮ್ಮ ಆಪ್ತನ ನನೆದು ಕೇದಾರನಾಥ ಶರ್ಮಾ ಭಾವುಕರಾದರು.
‘ಸರಳ ಸಜ್ಜನಿಕೆಯ ವ್ಯಕ್ತಿ’
ಮಿಲ್ಖಾ ಸಿಂಗ್ ತಮ್ಮ ತಾಯ್ನೆಲದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ದಿಗ್ಗಜ ಅಥ್ಲೀಟ್ ಆಗಿದ್ದರೂ, ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರೂ ಅವರು ಅತೀ ಸರಳ ಜೀವನ ನಡೆಸುತ್ತಿದ್ದರು. ಇಂಥ ಸರಳ ಸಜ್ಜನಿಕೆಯ ವ್ಯಕ್ತಿಯನ್ನು ಇನ್ನೆಂದೂ ಕಾಣಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ:ಜೀವನದ ಓಟ ನಿಲ್ಲಿಸಿದ ಭಾರತದ 'ಫ್ಲೈಯಿಂಗ್ ಸಿಖ್' ಖ್ಯಾತಿಯ ಮಿಲ್ಖಾ ಸಿಂಗ್!