ಮೊಹಾಲಿ : ಕೋವಿಡ್-19 ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಭಾರತ ಲೆಜೆಂಡರಿ ಸ್ಪ್ರಿಂಟರ್ ಮಿಲ್ಖಾ ಸಿಂಗ್ ಆಮ್ಲಜನಕದ ಸಹಾಯ ಪಡೆಯುತ್ತಿದ್ದರೂ ಸಹಾ ಭಾನುವಾರ ಕುಟುಂಬಸ್ಥರ ಮನವಿ ಮೇರೆಗೆ ಡಿಸ್ಚಾರ್ಜ್ ಆಗಿದ್ದಾರೆ.
91 ವರ್ಷದ ಮಿಲ್ಖಾ ಸಿಂಗ್ ಪ್ರಸ್ತುತ ಸ್ಥಿರವಾಗಿದ್ದಾರೆ. ಆದರೆ, ಅವರ 82 ವರ್ಷದ ಪತ್ನಿ ನಿರ್ಮಲಾ ಕೌರ್ ಶನಿವಾರ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಐಸಿಯುಗೆ ಶಿಫ್ಟ್ ಮಾಡಲಾಗಿದೆ.
"ಕುಟುಂಬಸ್ಥರ ಮನವಿ ಮೇರೆಗೆ ಸ್ಥಿರವಾಗಿರುವ ಮಿಲ್ಖಾ ಸಿಂಗ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅವರು ಈಗಲೂ ಆಮ್ಲಜನಕ ಮತ್ತು ಪೌಷ್ಠಿಕಾಂಶದ ಬೆಂಬಲದಲ್ಲಿದ್ದಾರೆ " ಎಂದು ಫೋರ್ಟಿಸ್ ಆಸ್ಪತ್ರೆ ಹೇಳಿಕೆ ಬಿಡುಗಡೆ ಮಾಡಿದೆ.
ಕೋವಿಡ್-19 ಪಾಸಿಟಿವ್ಗೆ ದೃಢಪಟ್ಟನಂತರ ಮಿಲ್ಖಾ ಸಿಂಗ್ ಕೋವಿಡ್ ನ್ಯುಮೇನಿಯಾದಿಂದ ಸೋಮವಾರ ಆಸ್ಪತ್ರೆಗೆ ದಾಖಲಾದರೆ, ಅದೇ ಕಾರಣಕ್ಕೆ ಅವರ ಪತ್ನಿ ಬುಧವಾರ ದಾಖಲಾಗಿದ್ದರು.
ಮಿಲ್ಖಾ ಸಿಂಗ್ ಕಾಮನ್ವೆಲ್ತ್ ಗೇಮ್ಸ್ನ(1958) 400 ಮೀಟರ್ ವಿಭಾಗದಲ್ಲಿ ಚಿನ್ನ ಗೆದ್ದಿರುವ ಏಕೈಕ ಆಥ್ಲೀಟ್ ಎನಿಸಿಕೊಂಡಿದ್ದಾರೆ. ಅಲ್ಲದೇ 1958 ಮತ್ತು 1962ರ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಅವರು ಭಾರತದ ಪರ 1956ರ ಮೆಲ್ಬೋರ್ನ್, 1960ರ ರೋಮ್ ಮತ್ತು 1964ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದರು. 1960ರ 400 ಮೀಟರ್ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದು, ಅವರ ಶ್ರೇಷ್ಠ ಸಾಧನೆಯಾಗಿದೆ.
ಇದನ್ನು ಓದಿ:ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆದ್ದ ಮೇರಿ ಕೋಮ್