ಚಂಡೀಗಢ (ಪಂಜಾಬ್): ಕೊರೊನಾ ಸೋಂಕಿಗೆ ಒಳಗಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದ ಲೆಜೆಂಡರಿ ಸ್ಪ್ರಿಂಟರ್ ಮಿಲ್ಖಾ ಸಿಂಗ್ (91) ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೇಹದಲ್ಲಿ ಆಮ್ಲಜನಕದ ಮಟ್ಟ ಕಡಿಮೆಯಾಗಿದ್ದರಿಂದ ಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್ರನ್ನು ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಪಿಜಿಐಎಂಇಆರ್)ಯ ಕೋವಿಡ್ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೆಲ ದಿನಗಳ ಹಿಂದೆ ಮಿಲ್ಖಾ ಸಿಂಗ್ ಹಾಗೂ ಅವರ ಪತ್ನಿ ನಿರ್ಮಲ್ ಕೌರ್ (82)ಗೆ ವೈರಸ್ ತಗುಲಿತ್ತು. ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಸಿಂಗ್ರನ್ನು ಹಾಗೂ ಅದೇ ಆಸ್ಪತ್ರೆಯ ಐಸಿಯುನಲ್ಲಿ ಕೌರ್ರನ್ನು ದಾಖಲಿಸಲಾಗಿತ್ತು. ಕುಟುಂಬಸ್ಥರ ಮನವಿ ಮೇರೆಗೆ ಕಳೆದ ಭಾನುವಾರ ಮಿಲ್ಖಾ ಸಿಂಗ್ರನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಮನೆಯಲ್ಲಿಯೇ ಆಕ್ಸಿಜನ್ ಬೆಂಬಲದೊಂದಿಗೆ ಚೇತರಿಸಿಕೊಳ್ಳುತ್ತಿದ್ದರು. ನಿರ್ಮಲ್ ಅವರಿಗೆ ಐಸಿಯುನಲ್ಲೇ ಚಿಕಿತ್ಸೆ ಮುಂದುವರೆದಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಮಿಲ್ಖಾ ಸಿಂಗ್ರ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನೂ ಓದಿ: ಕುಟುಂಬದ ಕೋರಿಕೆಯ ಮೇರೆಗೆ ಆಸ್ಪತ್ರೆಯಿಂದ ಮಿಲ್ಖಾ ಸಿಂಗ್ ಡಿಸ್ಚಾರ್ಜ್
1958ರಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನ 400 ಮೀಟರ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಏಕೈಕ ಅಥ್ಲೀಟ್ ಮಿಲ್ಖಾ ಸಿಂಗ್ ಆಗಿದ್ದಾರೆ. 1958 ಮತ್ತು 1962ರ ಏಷ್ಯನ್ ಗೇಮ್ಸ್ನಲ್ಲಿ ಕೂಡ ಚಿನ್ನದ ಪದಕ ಗೆದ್ದಿದ್ದರು. ಅವರು ಭಾರತದ ಪರ 1956ರ ಮೆಲ್ಬೋರ್ನ್, 1960ರ ರೋಮ್ ಮತ್ತು 1964ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದರು. ರೋಮ್ನಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ 400 ಮೀಟರ್ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದು ಅವರ ಶ್ರೇಷ್ಠ ಸಾಧನೆಯಾಗಿದೆ. ಇವರು ಫ್ಲೈಯಿಂಗ್ ಸಿಖ್ ಎಂದೇ ಪ್ರಸಿದ್ಧರಾಗಿದ್ದಾರೆ.