ಪುಣೆ: ಪ್ರೊ ಕಬಡ್ಡಿ ಲೀಗ್ನ 7 ನೇ ಆವೃತ್ತಿಯ 97 ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡ ಮಣೀಂದರ್ ಸಿಂಗ್ ಅವರ ಭರ್ಜರಿ ರೈಡಿಂಗ್ ನೆರವಿನಿಂದ ಹರಿಯಾಣ ಸ್ಟೀಲರ್ಸ್ ವಿರುದ್ಧ 48-36 ಅಂಕಗಳ ಅಂತರದಿಂದ ಬಗ್ಗು ಬಡಿದಿದೆ.
ಪುಣೆಯ ಶ್ರೀ ಛತ್ರಪತಿ ಕುಸ್ತಿ ಅಂಗಳದಲ್ಲಿ ನಡೆದ ಲೀಗ್ 97ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಹರಿಯಾಣ ವಿರುದ್ಧ ಆರಂಭದಿಂದಲೇ ಆಕ್ರಮಣ ಆಟಕ್ಕೆ ಮುಂದಾಯಿತು. ಇದರ ಫಲ ಮೊದಲಾರ್ಧದಲ್ಲೇ 30-14 ರ ಮುನ್ನಡೆ ಸಾಧಿಸಿತು. ಅಲ್ಲದೆ ಹರಿಯಾಣ ತಂಡವನ್ನು 2 ಬಾರಿ ಆಲೌಟ್ ಮಾಡಿತು.
ದ್ವಿತೀಯಾರ್ಧದಲ್ಲಿ ಸ್ಟೀಲರ್ಸ್ ತಿರುಗಿ ಬೀಳುವ ಮುನ್ಸೂಚನೆ ನೀಡಿತ್ತಾದರೂ ಬೆಂಗಾಲ್ ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದರಿಂದ ಹರಿಯಾಣ ಸೋಲೊಪ್ಪಿಕೊಳ್ಳಬೇಕಾಯಿತು. ಆದರೆ ದ್ವಿತೀಯಾರ್ಧದಲ್ಲಿ ಹರಿಯಾಣ 22 ಅಂಕ ಪಡೆದರೆ, ಬೆಂಗಾಲ್ 18 ಅಂಕ ಪಡೆಯಿತು. ಎರಡೂ ತಂಡಗಳು ಒಮ್ಮೆ ಅಲೌಟ್ ಆದವು.
ಬೆಂಗಾಲ್ ಪರ ಭರ್ಜರಿ ರೈಡಿಂಗ್ ನಡೆಸಿದ ಮಣೀಂದರ್ ಸಿಂಗ್ 18 ಅಂಕ ಪಡೆದರೆ, ಮತ್ತೊಬ್ಬ ರೈಡರ್ ಪ್ರಪಂಜನ್ 7 ಆಂಕ ಪಡೆದರು. ಬಲ್ದೇವ್ ಸಿಂಗ್ 6, ಮೊಹಮ್ಮದ್ ನಬೀಬಕ್ಷ್ 5 ರಿಂಕು ನರ್ವಾಲ್ 3, ಜೀವಾಕುಮಾರ್ 2 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಸ್ಟೀಲರ್ಸ್ ಪರ ವಿನಯ್ 14, ವಿಕಾಶ್ ಕಂಡೋಲಾ 9, ವಿಕಾಶ್ ಕಾಳೆ 3, ರವಿಕುಮಾರ್ 2, ಪ್ರಶಾಂತ್ ಕುಮಾರ್ 1 ಅಂಕಪಡೆದರು. ರೈಡಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿದರೂ, ಡಿಫೆಂಡಿಗ್ನಲ್ಲಿ ತೀರಾ ಕಳಪೆ ಪ್ರದರ್ಶನ ತೋರಿದ್ದೆ ಹರಿಯಾಣ ಸೋಲಿಗೆ ಕಾರಣವಾಯಿತು.