ಪಂಚಕುಲ (ಹರಿಯಾಣ): ಇಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಯುವಕ ಆದಿಲ್ ಅಲ್ತಾಫ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ. 70 ಕಿಲೋ ಮೀಟರ್ ರೇಸ್ನಲ್ಲಿ ಮೊದಲಿಗನಾಗಿ ಗುರಿ ತಲುಪುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಶ್ರೀನಗರದ ನಿವಾಸಿಯಾದ ಸಾಮಾನ್ಯ ದರ್ಜಿಯ(ಟೈಲರ್) ಮಗನಾದ ಆದಿಲ್ ಅಲ್ತಾಫ್ ಖೇಲೋ ಇಂಡಿಯಾ ಸೈಕಲ್ ಸ್ಪರ್ಧೆಯಲ್ಲಿ ಎರಡನೇ ಪದಕವನ್ನು ಜಯಿಸಿದ್ದಾರೆ. ನಿನ್ನೆಯಷ್ಟೇ 28 ಕಿ.ಮೀ. ವೈಯಕ್ತಿಕ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದ ಅಲ್ತಾಫ್ 70 ಕಿ.ಮೀ. ರೋಸ್ ರೇಸ್ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಅಲ್ತಾಫ್ರ ಈ ಸಾಧನೆಗೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅಭಿನಂದಿಸಿದ್ದಾರೆ.
ಮಹಾರಾಷ್ಟ್ರದ ಸಿದ್ಧೇಶ್ ಪಾಟೀಲ್ ಮತ್ತು ದೆಹಲಿಯ ಅರ್ಷದ್ ಫರಿದಿ ಸೇರಿದಂತೆ ಘಟಾನುಘಟಿ ಸೈಕ್ಲಿಸ್ಟ್ಗಳು ಒಡ್ಡಿದ ಸವಾಲನ್ನು ಮೀರಿದ ಅಲ್ತಾಫ್ ಖೇಲೋ ಇಂಡಿಯಾದಲ್ಲಿ ಜಮ್ಮು ಕಾಶ್ಮೀರದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಇದು ನನಗೆ ಅದ್ಭುತ ಕ್ಷಣ. ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎಂದು ಬಂದಿದ್ದೆ. ಚಿನ್ನ ಜಯಿಸುವ ಮೂಲಕ ನನ್ನ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ಆದಿಲ್ ಅಲ್ತಾಫ್ ಹೇಳಿದ್ದಾರೆ.
ತಂದೆಯ ಕೆಲಸಕ್ಕಾಗಿ ಸೈಕಲ್ ಕಲಿತ: ಆದಿಲ್ ಅಲ್ತಾಫ್ ಸೈಕ್ಲಿಸ್ಟ್ ಆಗಿದ್ದೇ ಒಂದು ರೋಚಕ ಕಥೆಯಾಗಿದೆ. ಆದಿಲ್ ತಂದೆ ದರ್ಜಿಯಾಗಿದ್ದು, ಜನರ ಬಟ್ಟೆಗಳನ್ನು ಹೊಲಿದ ಮೇಲೆ ಅವುಗಳನ್ನು ಅವರ ಮನೆಗಳಿಗೆ ಮರಳಿಸಲು ಮಗನ ಕಡೆಯಿಂದ ಮನೆಗಳಿಗೆ ಕಳುಹಿಸುತ್ತಿದ್ದರು. ಇದಕ್ಕಾಗಿ ಆದಿಲ್ಗೆ ಸಣ್ಣ ಸೈಕಲ್ ಒಂದನ್ನು ಖರೀದಿಸಿಕೊಟ್ಟಿದ್ದರು.
ದಿನವೂ ತಂದೆಯ ಕೆಲಸದಲ್ಲಿ ನೆರವಾಗುತ್ತಿದ್ದ ಆದಿಲ್ ಮಧ್ಯ ಕಾಶ್ಮೀರದ ಶ್ರೀನಗರ ಜಿಲ್ಲೆಯ ಲಾಲ್ ಬಜಾರ್‌ನ ಗಲ್ಲಿ ಗಲ್ಲಿಯಲ್ಲಿ ಸೈಕಲ್ ಓಡಿಸಿ ಪರಿಣತನಾಗಿದ್ದ. 15ನೇ ವಯಸ್ಸಿನಲ್ಲಿದ್ದಾಗ ಆದಿಲ್ ತನ್ನ ಕಾಶ್ಮೀರ ಹಾರ್ವರ್ಡ್ ಶಾಲೆಯಲ್ಲಿ ಆಯೋಜಿಸಲಾದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ. ಬಳಿಕ ತಾನು ಸೈಕ್ಲಿಸ್ಟ್ ಆಗಬೇಕು ಎಂದು ಕಠಿಣ ಶ್ರಮ ವಹಿಸಲು ಶುರುವಿಟ್ಟುಕೊಂಡಿದ್ದ.
ಬಡತನದ ಮಧ್ಯೆಯೂ ಮಗನ ಸಾಧನೆಗೆ ಆದಿಲ್ ತಂದೆ ಬಟ್ಟೆ ಹೊಲಿದ ಕೂಡಿಟ್ಟ ಹಣವನ್ನು ಸೈಕಲ್ ಖರೀದಿಗೆ ನೀಡುತ್ತಿದ್ದರು. ಆದಿಲ್ ಸ್ಥಳೀಯವಾಗಿ ಆಯೋಜಿಸಲಾಗುತ್ತಿದ್ದ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಜಯಿಸಿ ಹೆಸರಾಗಿದ್ದ. ಬಳಿಕ ಶ್ರೀನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆದಿಲ್ ನೆರವಿಗೆ ಬಂದು ಎಂಟಿಬಿ ಸೈಕಲ್ ಖರೀದಿಗಾಗಿ 4.5 ಲಕ್ಷ ರೂ. ಪ್ರಾಯೋಜಕತ್ವ ನೀಡಿತ್ತು.
18 ವರ್ಷದ ಅಲ್ತಾಫ್ ಕಳೆದ 6 ತಿಂಗಳಿಂದ ಎನ್‌ಐಎಸ್ ಪಟಿಯಾಲದಲ್ಲಿ ತರಬೇತಿ ಪಡೆಯುತ್ತಿದ್ದು, ಖೇಲೋ ಇಂಡಿಯಾ ಗೇಮ್ಸ್‌ಗೆ ತಯಾರಿ ನಡೆಸುತ್ತಿದ್ದರು. ಇದೀಗ ಬೆಳ್ಳಿ, ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಓದಿ; SA- India 2nd T20: ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ.. ಗೆಲ್ಲುವ ಉತ್ಸಾಹದಲ್ಲಿ ಭಾರತ