ನವದೆಹಲಿ: ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಬಹುಮಾನದ ಮೊತ್ತದಲ್ಲಿ ಭಾರೀ ಹೆಚ್ಚಳ ಮಾಡಿ ಕ್ರೀಡಾ ಸಚಿವ ಕಿರಣ್ ರಿಜಿಜು ಪ್ರಕಟಣೆ ಹೊರಡಿಸಿದ್ದಾರೆ.
ಕ್ರೀಡಾ ಮತ್ತು ಸಾಹಸ ಪ್ರಶಸ್ತಿಗಳಿಗೆ ಬಹುಮಾನದ ಮೊತ್ತ ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಅರ್ಜುನ ಪ್ರಶಸ್ತಿ ಮತ್ತು ಖೇಲ್ ರತ್ನ ಪ್ರಶಸ್ತಿಗಾಗಿ ಬಹುಮಾನದ ಹಣವನ್ನು ಕ್ರಮವಾಗಿ 15 ಲಕ್ಷ ಮತ್ತು 25 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕೂ ಮೊದಲು ಖೇಲ್ ರತ್ನ ವಿಜೇತರು 7.5 ಲಕ್ಷ ರೂ. ನಗದು ಬಹುಮಾನ ಪಡೆಯುತ್ತಿದ್ದರೆ, ಅರ್ಜುನ ಪ್ರಶಸ್ತಿ ಪುರಸ್ಕೃತರಿಗೆ 5 ಲಕ್ಷ ರೂ. ನೀಡಲಾಗುತ್ತಿತ್ತು. ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಬಹುಮಾನದ ಹಣವನ್ನು ಕೊನೆಯದಾಗಿ 2009ರಲ್ಲಿ ಹೆಚ್ಚಿಸಲಾಯಿತು.
ಕ್ರೀಡಾ ಪ್ರಶಸ್ತಿಗಳ ಇತಿಹಾಸದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ವರ್ಚುವಲ್ ಮೋಡ್ ಮೂಲಕ ಪ್ರದಾನ ಮಾಡಲಾಗುತ್ತಿದೆ. 60 ಮಂದಿ ಪ್ರಶಸ್ತಿ ವಿಜೇತರು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.
ಆರೋಗ್ಯ ಮತ್ತು ಇತರ ಕಾರಣಗಳಿಂದಾಗಿ 14 ಮಂದಿ ಪ್ರಶಸ್ತಿ ಪುರಸ್ಕೃತರು ವಿವಿಧ ಎಸ್‌ಐಐ ಕೇಂದ್ರಗಳಿಂದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಾರಂಭಗಳಿಗೆ ಹಾಜರಾಗುವುದಿಲ್ಲ ಎಂದು ಎಸ್‌ಎಐ ಹೇಳಿಕೆಯಲ್ಲಿ ತಿಳಿಸಿದೆ. ಪ್ರಶಸ್ತಿ ವಿಜೇತರಿಗೆ ವರ್ಚುವಲ್ ಮೋಡ್‌ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.