ಸಲಾಲಾಹ್ (ಒಮಾನ್): ಭಾರತ ಜೂನಿಯರ್ ಪುರುಷರ ಹಾಕಿ ತಂಡವು 2023 ರ ಜೂನಿಯರ್ ಏಷ್ಯಾ ಕಪ್ ಸೆಮಿಫೈನಲ್‌ನಲ್ಲಿ ಸತತ ಎರಡನೇ ಬಾರಿಗೆ ಕೊರಿಯಾವನ್ನು 9-1 ಅಂತರದಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಟೂರ್ನಿಯ ಪ್ರತಿ ಪಂದ್ಯದಲ್ಲೂ ಭಾರತ ಪ್ರಾಬಲ್ಯ ಮೆರೆದಿದೆ. ನಿನ್ನೆ ನಡೆದ ಪಂದ್ಯದಲ್ಲಿ ತಂಡದ ಪರ ಸುನಿತ್ ಲಾಕ್ರಾ, ಅರ್ಜಿತ್ ಸಿಂಗ್ ಹುಂದಾಲ್, ಅಂಗದ್ ಬೀರ್ ಸಿಂಗ್, ಉತ್ತಮ್ ಸಿಂಗ್, ವಿಷ್ಣುಕಾಂತ್ ಸಿಂಗ್ ಮತ್ತು ಶಾರದಾನಂದ್ ತಿವಾರಿ ತಲಾ ಒಂದು ಗೋಲು ಗಳಿಸಿದ್ದು, ಬಾಬಿ ಸಿಂಗ್ ಧಾಮಿ ಸೆಮಿಫೈನಲ್‌ನಲ್ಲಿ ಮೂರು ಗೋಲು ಗಳಿಸಿ ಮಿಂಚಿದ್ದಾರೆ. ಮಹತ್ವದ ಗೆಲುವಿನ ನಂತರ ಹಾಲಿ ಚಾಂಪಿಯನ್ ಭಾರತವು ಫೈನಲ್‌ಗೆ ಲಗ್ಗೆ ಹಾಕಿದ್ದು ಇಂದು ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಪಂದ್ಯದಲ್ಲಿ ಭಾರತದ ಪ್ರದರ್ಶನವನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಮೊದಲಾರ್ಧದಲ್ಲಿ ಭಾರತ ಎಚ್ಚರಿಕೆಯಿಂದ ಆಟ ಪ್ರದರ್ಶಿಸಿದರೆ, ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಹೋರಾಟ ನಡೆಸಿತು. ಇದೀಗ ಏಷ್ಯನ್ ಚಾಂಪಿಯನ್ ಭಾರತ ತನ್ನ ನಾಲ್ಕನೇ ಪ್ರಶಸ್ತಿಯ ಹುಡುಕಾಟದಲ್ಲಿದೆ. 2015 ರ ಫೈನಲ್‌ನಲ್ಲಿ 6-2 ಅಂತರದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಜಯಿಸಿತ್ತು.
ಭಾರತ-ಪಾಕ್ ಫೈನಲ್: ಒಮಾನ್‌ನ ಸಲಾಲಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಗುರುವಾರ (ಇಂದು) ನಡೆಯಲಿರುವ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ಉಭಯ ದೇಶಗಳ ನಡುವಣ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 9:30 ಕ್ಕೆ ಆರಂಭವಾಗಲಿದೆ.
ಲೀಗ್ ಹಂತದಲ್ಲಿ ಎರಡೂ ತಂಡಗಳು ಎದುರಾದಾಗ ಪಂದ್ಯ 1-1 ರಲ್ಲಿ ಡ್ರಾ ಮೂಲಕ ಅಂತ್ಯಗೊಂಡಿತ್ತು. ಭಾರತ ತಮ್ಮ ಗುಂಪಿನಲ್ಲಿ ಗೋಲು ವ್ಯತ್ಯಾಸದಲ್ಲಿ ಅಗ್ರಸ್ಥಾನದಲ್ಲಿದ್ದರೆ, ಪಾಕಿಸ್ತಾನ ಎರಡನೇ ಸ್ಥಾನ ಗಳಿಸಿತು. ಹಾಲಿ ಚಾಂಪಿಯನ್ ಭಾರತ ಚೈನೀಸ್ ತೈಪೆ ವಿರುದ್ಧ 18-0 ಅಂತರದ ಜಯದೊಂದಿಗೆ ಅಭಿಯಾನ ಆರಂಭಿಸಿತ್ತು. ಜಪಾನ್ ತನ್ನ ಎರಡನೇ ಪಂದ್ಯದಲ್ಲಿ 3-1 ಗೋಲುಗಳಿಂದ ಶರಣಾಯಿತು. ಆದರೆ ಭಾರತ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 17-0 ಅಂತರದ ಭರ್ಜರಿ ಜಯ ಸಾಧಿಸಿತು.
ಪಾಕಿಸ್ತಾನ ಮೊದಲ ಪಂದ್ಯದಲ್ಲಿ 15-1 ರಿಂದ ಚೈನೀಸ್ ತೈಪೆಯನ್ನು ಮಣಿಸಿತ್ತು. ಎರಡನೇ ಪಂದ್ಯದಲ್ಲಿ ಥಾಯ್ಲೆಂಡ್ ಅನ್ನು 9-0 ಗೋಲುಗಳಿಂದ ಸೋಲಿಸಿದೆ. ಜಪಾನ್ ವಿರುದ್ಧ 3-2 ಗೆಲುವಿನೊಂದಿಗೆ ಲೀಗ್ ಹಂತ ಕೊನೆಗೊಳಿಸಿದೆ. ಅಂತಿಮವಾಗಿ ಪಾಕಿಸ್ತಾನ 6-2 ರಲ್ಲಿ ಮಲೇಷ್ಯಾವನ್ನು ಸೋಲಿಸಿ ಫೈನಲ್‌ಗೆ ದಾಪುಗಾಲಿಟ್ಟಿತು.
ಭಾರತ- ಪಾಕಿಸ್ತಾನ ಈ ಹಿಂದೆ ಮೂರು ಬಾರಿ ಜೂನಿಯರ್ ಏಷ್ಯಾಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. 1996 ರಲ್ಲಿ ಪಾಕಿಸ್ತಾನ ತಂಡ ಚಾಂಪಿಯನ್ ಆಗಿದ್ದರೆ, ಭಾರತ 2004 ರಲ್ಲಿ ವಿಜಯಿಯಾಗಿತ್ತು. 2015 ರಲ್ಲಿ ಮಲೇಷ್ಯಾದಲ್ಲಿ ನಡೆದ ಕೊನೆಯ ಆವೃತ್ತಿಯಲ್ಲಿ ಭಾರತ ಪಾಕ್ ಸೋಲಿಸಿ ಪ್ರಶಸ್ತಿ ಗೆದ್ದಿತ್ತು. ಇದೀಗ 8 ವರ್ಷಗಳ ನಂತರ ಪುರುಷರ ಜೂನಿಯರ್ ಏಷ್ಯಾ ಕಪ್ ಹಾಕಿ ಪಂದ್ಯಾವಳಿ ಆಯೋಜಿಸಲಾಗಿದೆ. ಕೋವಿಡ್ ಕಾರಣದಿಂದಾಗಿ 2021 ರ ಆವೃತ್ತಿಯನ್ನು ಮುಂದೂಡಲಾಗಿತ್ತು.
ಇದನ್ನೂ ಓದಿ: WTC Final 2023: ಭಾರತದ ಸ್ಪಿನ್ ಬೌಲರ್ಗಳು ಓವೆಲ್ ಪಿಚ್ನಲ್ಲೂ ಕಾಡುವ ಭಯ ಇದೆ - ಸ್ಟೀವ್ ಸ್ಮಿತ್