ಪುಣೆ: ಗಾಯದ ಸಮಸ್ಯೆ, ನಿರೀಕ್ಷೆಯಂತೆ ಸಿಗದ ಯಶಸ್ಸು, ಡಬಲ್ಸ್ನತ್ತ ಹೆಚ್ಚಿನ ಗಮನ ಕಾರಣಕ್ಕಾಗಿ ಭಾರತದ ಖ್ಯಾತ ಟೆನಿಸ್ ಆಟಗಾರ ಯೂಕಿ ಭಾಂಬ್ರಿ ಸಿಂಗಲ್ಸ್ ಸ್ಪರ್ಧೆಗಳಿಗೆ ಸದ್ದಿಲ್ಲದೇ ವಿದಾಯ ಘೋಷಿಸಿದ್ದಾರೆ. ಇನ್ನು ಮುಂದೆ ತಾವು ಸಿಂಗಲ್ಸ್ ವಿಭಾಗದಲ್ಲಿ ಆಡುವುದಿಲ್ಲ. ಡಬಲ್ಸ್ ಪಂದ್ಯಗಳಲ್ಲಿ ಮಾತ್ರ ಸೆಣಸಾಡುವೆ ಎಂದು ತಿಳಿಸಿದ್ದಾರೆ.
ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಯೂಕಿ, 'ಸತತ ಗಾಯದ ಸಮಸ್ಯೆಗಳಿಂದಾಗಿ ತಾವು ಟೆನಿಸ್ ಸಿಂಗಲ್ಸ್ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಸಿಂಗಲ್ಸ್ ವಿಭಾಗದ ವೃತ್ತಿಜೀವನದಲ್ಲಿ ಸಾಧ್ಯವಾದಷ್ಟು ಸಾಧನೆ ಮಾಡಿದ್ದೇನೆ. ಅದರಲ್ಲಿ ಹೆಚ್ಚಿನ ಯಶಸ್ಸು ಸಿಗದ ಕಾರಣ, ಡಬಲ್ಸ್ನಲ್ಲಿ ಸಾಧನೆ ಮಾಡುವ ಗುರಿ ಹೊಂದಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.
2019ರಲ್ಲೇ ನಿರ್ಧಾರ: 'ಈ ಕುರಿತಾಗಿ ನಾನು 2019ರಲ್ಲೇ ನಿರ್ಧರಿಸಿದ್ದೆ. ಬಹಳ ಹಿಂದಿನ ನಿರ್ಧಾರವನ್ನು ಈಗ ಪ್ರಕಟಿಸಿದ್ದೇನೆ. ಕಳೆದ ವರ್ಷ ಗಾಯದಿಂದ ಚೇತರಿಸಿಕೊಂಡು ಮತ್ತೆ ಅಖಾಡಕ್ಕೆ ಇಳಿದೆ. ಆದರೆ, ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ' ಎಂದು ಯೂಕಿ ತಿಳಿಸಿದ್ದಾರೆ.
ಈಡೇರದ ಟಾಪ್ 50 ಕನಸು: ಯೂಕಿ ಬಾಂಬ್ರಿ ಅವರು ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ಟಾಪ್ 50 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯಬೇಕು ಎಂಬ ಗುರಿ ಹೊಂದಿದ್ದರು. ಆದರೆ, ಅದು ಈವರೆಗೂ ಸಾಧ್ಯವಾಗಿಲ್ಲ. ಭಾರತದ ಟೆನಿಸ್ ಆಟಗಾರರು ಸಿಂಗಲ್ಸ್ನಲ್ಲಿ ಯಶಸ್ಸು ಸಾಧಿಸಿತ್ತು ಕಡಿಮೆ. ಈ ವಿಭಾಗ ಹೆಚ್ಚಿನ ಸ್ಪರ್ಧಾತ್ಮಕತೆಯಿಂದ ಕೂಡಿದೆ. ಯಶಸ್ಸು ಗಳಿಸುವುದು ಸುಲಭವಲ್ಲ ಎಂದೂ ಹೇಳಿದ್ದಾರೆ.
ಡಬಲ್ಸ್ನತ್ತ ಚಿತ್ತ: 'ಮೂರು ವರ್ಷ ಸತತ ಗಾಯದಿಂದ ಬಳಲಿದ್ದೇನೆ. ಅಮೆರಿಕದಲ್ಲಿ ಚಿಕಿತ್ಸೆ ಪಡೆದುಕೊಂಡ ಬಳಿಕ ಕಳೆದ ವರ್ಷ ಮತ್ತೆ ಅಖಾಡಕ್ಕಿಳಿದೆ. ಸಿಂಗಲ್ಸ್ ವಿಭಾಗ ಸವಾಲಾಯಿತು. ಹೀಗಾಗಿ ಗುರಿಯನ್ನು ಬದಲಿಸಿ ಡಬಲ್ಸ್ನಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದೇನೆ. ಇದರಲ್ಲಿಯೇ ಯಶಸ್ಸು ಸಾಧಿಸಲು ಶ್ರಮಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.
ಭಾರತದ ಸಹ ಆಟಗಾರರಾದ ಸಾಕೇತ್ ಮೈನೇನಿ ಜೊತೆ ಡಬಲ್ಸ್ ಆಡುವ ಯೂಕಿ ಭಾಂಬ್ರಿ, 2021ರಲ್ಲಿ ಒಟ್ಟು 5 ಚಾಲೆಂಜರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಬಳಿಕ ಎಟಿಪಿ ಟೂರ್‌ನಲ್ಲಿ ಸೆಮಿಫೈನಲ್ ತಲುಪಿದ್ದರು. ಡಬಲ್ಸ್ ಶ್ರೇಯಾಂಕ ಪಟ್ಟಿಯಲ್ಲಿ 100 ಆಟಗಾರರಲ್ಲಿ ಒಬ್ಬರಾಗಿದ್ದೇವೆ. ಶೀಘ್ರವೇ ಇದನ್ನು 50 ರೊಳಗೆ ತರುವ ಬಯಕೆ ಇದೆ ಎಂದಿದ್ದಾರೆ.
ಸಿಂಗಲ್ಸ್ ತೊರೆದ 2ನೇ ಭಾರತೀಯ: ಯೂಕಿ ಭಾಂಬ್ರಿ ಟೆನಿಸ್ನಲ್ಲಿ ಸಿಂಗಲ್ಸ್ ವಿಭಾಗ ತೊರೆದ 2ನೇ ಆಟಗಾರರಾಗಿದ್ದಾರೆ. ಇದಕ್ಕೂ ಮೊದಲು ಟೆನಿಸ್ ತಾರೆ, ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಅವರು ಸಿಂಗಲ್ಸ್ ಬಿಟ್ಟು ಡಬಲ್ಸ್ನಲ್ಲಿಯೇ ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ಡಬಲ್ಸ್ನಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿದ್ದರು.
ಇದನ್ನೂ ಓದಿ: ಡೆಹ್ರಾಡೂನ್ನಿಂದ ಮುಂಬೈಗೆ ರಿಷಭ್ ಏರ್ಲಿಫ್ಟ್: ಅಂಬಾನಿ ಆಸ್ಪತ್ರೆಗೆ ಪಂತ್ ದಾಖಲು