ನವದೆಹಲಿ: ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಡಕಾರ್ ಬೈಕ್ ರ್ಯಾಲಿಯ ವೇಳೆ ಭಾರತದ ಖ್ಯಾತ ಮೋಟರ್ಸೈಕಲ್ ರೇಸರ್ ಸಿ.ಎಸ್. ಸಂತೋಷ್ ಅಪಘಾತಕ್ಕೀಡಾಗಿದ್ದು, ಅವರನ್ನು ರಿಯಾಧ್ನ ಆಸ್ಪತ್ರೆಯಲ್ಲಿ ವೈದ್ಯಕೀಯ ಪ್ರೇರಿತ ಕೋಮಾದಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.
37 ವರ್ಷದ ರೇಸರ್ ಸಂತೋಷ್ ಅವರು ಹೀರೋ ಮೋಟೋ ಸ್ಪೋರ್ಟ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಅವರು ನಿನ್ನೆ ನಡೆದ ವಿಶ್ವದ ಅತಿ ದೊಡ್ಡ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ವೇಳೆ ಮತ್ತೊಬ್ಬ ರೇಸರ್ನೊಂದಿಗೆ ಡಿಕ್ಕಿಯಾಗಿ ಅಪಘಾತಕ್ಕೀಡಾಗಿದ್ದಾರೆ. ಅವರನ್ನು ತಕ್ಷಣ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸದ್ಯ ತುರ್ತುನಿಗಾ ಘಟಕದಲ್ಲಿರಿಸಿ 24 ಗಂಟೆಗಳ ವೈದ್ಯರ ವೀಕ್ಷಣೆಯಲ್ಲಿರಿಸಲಾಗಿದೆ.
"ದುರದೃಷ್ಟಕರ ಘಟನೆಯೊಂದರಲ್ಲಿ ಸಿಎಸ್ ಸಂತೋಷ್ 'ಡಕಾರ್ 2021' ರ್ಯಾಲಿಯ 4 ನೇ ಹಂತದ ಸ್ಪರ್ಧೆಯ ವೇಳೆ ಅಪಘಾತಕ್ಕೀಡಾಗಿದ್ದಾರೆ. ಅವರನ್ನು ರಿಯಾಧ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಅರೋಗ್ಯ ಸ್ಥಿರವಾಗಿದೆ ಎಂದು ಆರಂಭಿಕ ಮೌಲ್ಯಮಾಪನದಿಂದ ತಿಳಿದುಬಂದಿದೆ. ಸಂತೋಷ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಮ್ಮೊಂದಿಗೆ ಪ್ರಾರ್ಥಿಸಿ" ಎಂದು ಹೀರೋ ಮೋಟೋಸ್ಪೋರ್ಟ್ಸ್ ಟ್ವೀಟ್ ಮಾಡಿದೆ.
ಕಳೆದ ವರ್ಷ ಇದೇ ಸ್ಪರ್ಧೆಯಲ್ಲಿ ಹೀರೋ ಮೋಟೋಸ್ಪೋರ್ಟ್ ರೈಡರ್ ಪಾಲೊ ಗೊನ್ಕಾಲ್ವ್ಸ್ 'ಡಾಕರ್ 2020' ರ್ಯಾಲಿಯಲ್ಲಿ ಸ್ಪರ್ಧಿಸಿದ್ದಾಗಲೇ ಸಾವನ್ನಪ್ಪಿದ್ದರು. ಗೋನ್ಕಾಲ್ವ್ಸ್ ಸಾವನ್ನಪ್ಪಿದ ನಂತರ ಹೀರೋ ಮೋಟೋ ಸ್ಪೋರ್ಟ್ ರ್ಯಾಲಿಯಿಂದ ಹಿಂದೆ ಸರಿದಿತ್ತು. ಇದೀಗ ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಕರಾಳ ಘಟನೆ ಸಂಭವಿಸಿದೆ.
ಇದನ್ನು ಓದಿ:ಸುಲಭ ಕ್ಯಾಚ್ಗಳನ್ನು ಕೈಚೆಲ್ಲಿ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾದ ರಿಷಭ್ ಪಂತ್