ನವದೆಹಲಿ: ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಆತಿಥೇಯ ಭಾರತ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್ಎಸ್ಎಫ್) ವಿಶ್ವಕಪ್‌ನಲ್ಲಿ ಪ್ರಾಬಲ್ಯ ಮುಂದುವರೆಸಿದ್ದು, ಶುಕ್ರವಾರ ಎರಡು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ 12 ಚಿನ್ನ, ಏಳು ಬೆಳ್ಳಿ ಮತ್ತು ಆರು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಭಾರತದ ಅನುಭವಿ ಶೂಟರ್ಸ್ಗಳಾದ ಸಂಜೀವ್ ರಜಪೂತ್–ತೇಜಸ್ವಿನಿ ಸಾವಂತ್, ಶೂಟಿಂಗ್ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಮಿಶ್ರ ತಂಡ ವಿಭಾಗದ 50 ಮೀಟರ್ ರೈಫಲ್ ತ್ರಿ ಪೊಸಿಷನ್ಸ್ ಸ್ಪರ್ಧೆಯಲ್ಲಿ ಶುಕ್ರವಾರ ಅಗ್ರಸ್ಥಾನ ಗಳಿಸಿದ್ದಾರೆ. ಫೈನಲ್ಸ್‌ನಲ್ಲಿ ಭಾರತದ ಶೂಟರ್‌ಗಳು 31-29 ಪಾಯಿಂಟ್ಸ್ಗಳಿಂದ ಉಕ್ರೇನ್‌ನ ಸೆರಿಯ್ ಕುಲಿಷ್–ಅನ್ನಾ ಇಲಿನಾ ಅವರನ್ನು ಸೋಲಿಸಿದರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಐಶ್ವರಿ ಪ್ರತಾಪ್ ಸಿಂಗ್ ತೋಮರ್–ಸುನಿಧಿ ಚೌಹಾನ್ 31-15 ರಿಂದ ಅಮೆರಿಕದ ತಿಮೋಥಿ ಶೆರಿ ವರ್ಜಿನಿಯಾ ಥ್ರೇಷರ್ ಅವರ ಸವಾಲನ್ನು ಮೀರಿ ಕಂಚಿನ ಪದಕ ಪಡೆದರು.
ಇದನ್ನೂ ಓದಿ: ಮತ್ತಷ್ಟು ಶತಕ ಗಳಿಸುವುದೇ ನನ್ನ ಗುರಿ; ಬೈರ್‌ಸ್ಟೋವ್
ಪುರುಷರ ವಿಭಾಗದಲ್ಲಿ ನೀರಜ್ ಕುಮಾರ್, ಸ್ವಪ್ನಿಲ್ ಕುಸಾಲೆ ಹಾಗೂ ಚೈನ್ ಸಿಂಗ್ ಅವರನ್ನೊಳಗೊಂಡ ಭಾರತದ ಪುರುಷರ ತಂಡವು 50 ಮೀ ರೈಫಲ್ 3 ಪೊಸಿಷನ್ಸ್‌ನಲ್ಲಿ ಚಿನ್ನದ ಪದ ಮುಡಿಗೇರಿಸಿಕೊಂಡಿತು. ಫೈನಲ್ಸ್‌ನಲ್ಲಿ 47-25 ಪಾಯಿಂಟ್ಸ್‌ನಿಂದ ಅಮೆರಿಕ ತಂಡವನ್ನು ಸೋಲಿಸಿದರು. ಈ ಮೂಲಕ ಭಾರತ ಗೆದ್ದ ಒಟ್ಟು ಚಿನ್ನದ ಪದಕಗಳ ಸಂಖ್ಯೆ 12ಕ್ಕೇರಿದೆ. 25 ಮೀ ರ‍್ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಜಯವೀರ್ ಸಿಧು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಫೈನಲ್ಸ್‌ನಲ್ಲಿ ಅವರು ಈಸ್ಟೋನಿಯಾದ ಪೀಟರ್ ಓಲೆಸ್ಕ್ ಎದುರು ಹಿನ್ನಡೆ ಅನುಭವಿಸಿದರು.