ನವದೆಹಲಿ: ಇಂಡಿಯಾ ಓಪನ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ವಿಶ್ವ ಚಾಂಪಿಯನ್ಶಿಪ್ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಸೇರಿದಂತೆ ಏಳು ಶಟ್ಲರ್ಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಟೂರ್ನಿಯಿಂದ ಹೊರಬಂದಿದ್ದಾರೆ.
ಭಾರತದಲ್ಲಿ ಕೋವಿಡ್ 3ನೇ ಅಲೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಅದರ ಪರಿಣಾಮ ಕ್ರೀಡೆಗೂ ತಟ್ಟಿದೆ. ಇಂಡಿಯಾ ಓಪನ್ನಲ್ಲಿ ಭಾಗವಹಿಸಿದ್ದ ಏಳು ಆಟಗಾರರಿಗೆ ಕೊರೊನಾ ದೃಢಪಟ್ಟಿದೆ ಎಂದು ಬ್ಯಾಡ್ಮಿಂಟನ್ ಫೆಡರೇಷನ್ ಖಚಿತಪಡಿಸಿದೆ. ಇಂಡಿಯಾ ಓಪನ್ ಆಯೋಜಕರಾದ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ಸೋಂಕಿತ ಆಟಗಾರರ ಹೆಸರನ್ನು ಗುರುವಾರ ಬಹಿರಂಗಪಡಿಸಿದೆ.
ಟೂರ್ನಿಯಲ್ಲಿ ನಂಬರ್ 1 ಶ್ರೇಯಾಂಕ ಪಡೆದುಕೊಂಡಿದ್ದ ಶ್ರೀಕಾಂತ್, ಅಶ್ವಿನಿ ಪೊನ್ನಪ್ಪ, ರಿತಿಕಾ ರಾಹುಲ್ ಠಕರ್, ತ್ರೀಸಾ ಜಾಲಿ, ಮಿಥುನ್ ಮಂಜುನಾಥ್, ಸಿಮ್ರಾನ್ ಅಮನ್ ಸಿಂಗ್ ಮತ್ತು ಖುಷಿ ಗುಪ್ತಾರಿಗೆ ಕೋವಿಡ್ ತಗುಲಿದೆ.
ಈ ಆಟಗಾರರು ಟೂರ್ನಿಯ 2ನೇ ಸುತ್ತಿಗೆ ತೇರ್ಗಡೆಗೊಂಡಿದ್ದರು. ಆದರೆ ಟೂರ್ನಿಯಿಂದ ಹಿಂದೆ ಸರಿದಿರುವುದರಿಂದ ಮುಖ್ಯ ಡ್ರಾದಲ್ಲಿ ಆಟಗಾರರನ್ನು ಬದಲಾಯಿಸಲಾಗುವುದಿಲ್ಲ. ಬದಲಾಗಿ ವಾಕ್ ಅವರ ಎದುರಾಳಿಗಳಿಗೆ ಮುಂದಿನ ಸುತ್ತಿಗೆ ವಾಕ್ಓವರ್ ನೀಡಲಾಗುತ್ತದೆ ಎಂದು ಬಿಎಐ ತಿಳಿಸಿದೆ.
2022ರ ಇಂಡಿಯಾ ಓಪನ್ ಟೂರ್ನಮೆಂಟ್ ಅನ್ನು ಬಿಎಐ ಇಂದಿರಾ ಗಾಂಧಿ ಸ್ಟೇಡಿಯಂನ ಕೆಡಿ ಜಾಧವ್ ಇಂದೋರ್ ಹಾಲ್ನಲ್ಲಿ ಪ್ರೇಕ್ಷರಿಗೆ ಅವಕಾಶವಿಲ್ಲದೆ ನಡೆಸಲಾಗುತ್ತಿದೆ. ಪ್ರೋಟೋಕಾಲ್ ಪ್ರಕಾರ, ಪ್ರತಿದಿನ ಎಲ್ಲ ಆಟಗಾರರು ಕೋವಿಡ್ ಪರೀಕ್ಷೆಗೆ ಒಳಪಡಬೇಕಾಗಿದೆ.
ಇದನ್ನೂ ಓದಿ:ಇಂಡಿಯಾ ಓಪನ್: ಕ್ವಾರ್ಟರ್ ಫೈನಲ್ಸ್ಗೆ ಸಿಂಧು, ಸೋತು ಹೊರಬಿದ್ದ ಸೈನಾ