ನವದೆಹಲಿ : ಪಟಿಯಾಲದ ಸುಭಾಷ್ ಚಂದ್ರ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಸ್ಪೋರ್ಟ್ಸ್ನಲ್ಲಿ ತರಬೇತಿ ಪಡೆಯುತ್ತಿರುವ ಭಾರತದ ಓಟಗಾರ್ತಿ ಹಿಮಾದಾಸ್ ಅಲ್ಲಿನ ಆಹಾರದ ಗುಣಮಟ್ಟ ಹಾಗೂ ಅನೈರ್ಮಲ್ಯದ ವಿರುದ್ಧ ಧ್ವನಿಯೆತ್ತಿದ್ದಾರೆ.
ಕಳೆದ ವರ್ಷ ಹಲವಾರು ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಬಂಗಾರ ಪದಕಗಳ ಭೇಟೆಯಾಡಿದ್ದ ಹಿಮದಾಸ್, ಎನ್ಐಎಸ್ನ ವ್ಯವಸ್ಥೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಹಿಮಾದಾಸ್ಗೆ ಅದೇ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಪಡೆಯುತ್ತಿರುವ ಹಲವಾರು ಅಥ್ಲೀಟ್ಗಳು ಸಹಾ ಬೆಂಬಲಿಸಿದ್ದಾರೆ. ಜೊತೆಗೆ ಅಡುಗೆ ಮನೆಯಲ್ಲಿನ ಕೆಟ್ಟ ನೈರ್ಮಲ್ಯದ ಬಗ್ಗೆ ಪ್ರತಿಭಟಿಸಿದ್ದಾರೆ.
ಸುದ್ದಿ ಪತ್ರಿಕೆಯೊಂದರ ಮಾಹಿತಿ ಪ್ರಕಾರ, ಹಿಮಾದಾಸ್ಗೆ ಊಟ ಮಾಡುವಾಗ ಮನುಷ್ಯನ ಉಗುರು ಪತ್ತೆಯಾಗಿದೆ. ಅದನ್ನು ಫೋಟೋ ತೆಗೆದುಕೊಂಡ ಎನ್ಐಎಸ್ ಆಡಳಿತ ಮಂಡಳಿಗೆ ಅವರು ತೋರಿಸಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಅರ್ಧಬೆಂದ ಆಹಾರವನ್ನು ನೀಡಲಾಗುತ್ತಿದೆ. ಇದರಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಥ್ಲೀಟ್ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಮಾ ಈ ವಿಷಯವನ್ನು ಕ್ರೀಡಾ ಸಚಿವ ಕಿರಣ್ ರಿಜಿಜು ಅವರ ಗಮನಕ್ಕೂ ತಂದಿದ್ದಾರೆ. ನಂತರ ರಿಜಿಜು ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವಂತೆ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಅಥ್ಲೀಟ್ಗಳು ಎಸ್‌ಎಐ ಮಹಾನಿರ್ದೇಶಕ ಸಂದೀಪ್ ಪ್ರಧಾನ್, ಕಾರ್ಯದರ್ಶಿ ಎಸ್‌ಎಐ, ರೋಹಿತ್ ಭಾರದ್ವಾಜ್ ಮತ್ತು ಇತರ ಅಧಿಕಾರಿಗಳು ವರ್ಚುವಲ್ ರಿವ್ಯೂ ಸಭೆಯಲ್ಲಿ ಹಿಮಾ ಮತ್ತು ಇತರ ಆಟಗಾರರು ತಮ್ಮ ದೂರನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ನಂತರ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಘಟನೆ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ. ಅದಕ್ಕಾಗಿ ಆಹಾರ ತನಿಖಾ ಸಮಿತಿಯೊಂದನ್ನು ರಚಿಸಲು ಆದೇಶಿಸಿದೆ.