ಮನಾಮ(ಬಹ್ರೇನ್): ಇಲ್ಲಿ ನಡೆಯುತ್ತಿರುವ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ 2022ರ ಮಹಿಳೆಯರ 45 ಕೆಜಿ ವಿಭಾಗದಲ್ಲಿ ಭಾರತದ ವೇಟ್‌ಲಿಫ್ಟರ್ ಹರ್ಷದಾ ಗರುಡ್ ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ. ಶನಿವಾರ ನಡೆದ ಸ್ಪರ್ಧೆಯಲ್ಲಿ ಹರ್ಷದಾ ಸ್ನ್ಯಾಚ್ ವಿಭಾಗದಲ್ಲಿ 68 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 84 ಕೆಜಿಯನ್ನು ಲಿಫ್ಟ್ ಮಾಡಿದರು. ಅವರು ಒಟ್ಟು 152 ಕೆಜಿ ಲಿಫ್ಟ್ ಮಾಡುವ ಮೂಲಕ ಸೀನಿಯರ್ ಕ್ರೀಡಾಕೂಟದಲ್ಲಿ ತಮ್ಮ ಮೊದಲ ಪ್ರಮುಖ ಪದಕವನ್ನು ಪಡೆದರು.
18 ವರ್ಷದ ಸಿಬನಿಯರ್ ವಿಭಾಗದಲ್ಲಿ ಫಿಲಿಪ್ಪೀನ್ಸ್‌ನ ರೋಸ್ ರಾಮೋಸ್ ಕುಡ 152 ಕೆಜಿ ತೂಕ ಎತ್ತುವ ಮೂಲಕ ಟೈ ಆಗಿತ್ತು. ಹರ್ಷದಾ ಅವರು ಸ್ನ್ಯಾಚ್ ಉತ್ತಮ ಲಿಫ್ಟ್ ಮಾಡಿದ್ದರಿಂದ ಕಂಚಿನ ಪದಕಕ್ಕೆ ಭಾಜನರಾದರು.
ವಿಯೆಟ್ನಾಂನ ಖೋಂಗ್ ಮೈ ಫುವಾಂಗ್ ಒಟ್ಟು 166 ಕೆಜಿ (78 ಕೆಜಿ ಸ್ನ್ಯಾಚ್ + 88 ಕೆಜಿ ಕ್ಲೀನ್ ಮತ್ತು ಜರ್ಕ್) ಎತ್ತುವ ಮೂಲಕ ಚಿನ್ನವನ್ನು ಪಡೆದರು. ಇಂಡೋನೇಷ್ಯಾದ ಎಸ್ ನಫಿಸತುಲ್ ಹರಿರೋಹ್ 162 ಕೆಜಿ (71 ಕೆಜಿ + 91 ಕೆಜಿ) ಎತ್ತುವ ಮೂಲಕ ಬೆಳ್ಳಿ ಪಡೆದರು.
ಜುಲೈನಲ್ಲಿ ಹರ್ಷದಾ ಏಷ್ಯನ್ ಯೂತ್ ಮತ್ತು ಜೂನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 157 ಕೆಜಿ ಚಿನ್ನವನ್ನು ಗೆದ್ದಿದ್ದರು. ಐಡಬ್ಲ್ಯುಎಫ್ ಜೂನಿಯರ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ವೇಟ್‌ಲಿಫ್ಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.
ಇದನ್ನೂ ಓದಿ : ಪುಟ್ಟ ಅಭಿಮಾನಿಯ ಸಾವಿಗೆ ಮರುಗಿದ ದಕ್ಷಿಣ ಆಫ್ರಿಕಾ ಕ್ರಿಕೆಟರ್ ಡೇವಿಡ್ ಮಿಲ್ಲರ್