ಬೆಂಗಳೂರು: ಆತಿಥೇಯ ಬೆಂಗಳೂರು ಬುಲ್ಸ್ ತಂಡವನ್ನ 38-32 ಅಂಕಗಳ ಅಂತರದಿಂದ ಮಣಿಸಿದ ಹರಿಯಾಣ ಸ್ಟೀಲರ್ಸ್ ತಂಡ ಪ್ರೋ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯಲ್ಲಿ ತನ್ನ ಮೊದಲೇ ಗೆಲುವು ದಾಖಲಿಸಿದೆ. ಶನಿವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ವಿನಯ್ (8 ಅಂಕ) ಮತ್ತು ಸಿದ್ಧಾರ್ಥ್ ದೇಸಾಯಿ (7 ಅಂಕ) ಉತ್ತಮ ಪ್ರದರ್ಶನದ ನೆರವಿನಿಂದ ಹರಿಯಾಣ ಜಯ ದಾಖಲಿಸಿತು.
ಪಂದ್ಯದ ಮೊದಲ ನಿಮಿಷದಲ್ಲಿ ಬುಲ್ಸ್ ಪರ ಸೂಪರ್ ರೈಡ್ ಮಾಡಿದ ಭರತ್, ಹರಿಯಾಣದ ಸಿದ್ಧಾರ್ಥ್ ದೇಸಾಯಿ, ಮೋಹಿತ್ ನಂದಾಲ್, ಜೈದೀಪ್ ದಹಿಯಾ, ರಾಹುಲ್ ಸೇತ್ಪಾಲ್ ಮತ್ತು ಮೋಹಿತ್ ಅವರನ್ನು ಔಟ್ ಮಾಡುವ ಮೂಲಕ ಬುಲ್ಸ್ ತಂಡಕ್ಕೆ 5-0 ಅಂತರದ ಮುನ್ನಡೆ ತಂದುಕೊಟ್ಟರು. ಆದಾಗ್ಯೂ ಸಹ ಹರಿಯಾಣ ಪರ ವಿನಯ್ ಕೆಲ ರೈಡ್ ಅಂಕಗಳನ್ನು ಗಳಿಸಿದರೆ, 7ನೇ ನಿಮಿಷದಲ್ಲಿ ಭರತ್ ರನ್ನ ಸೂಪರ್ ಟ್ಯಾಕಲ್ ಮಾಡಿದ ಜೈದೀಪ್ ದಹಿಯಾ ಸ್ಟೀಲರ್ಸ್ ತಂಡಕ್ಕೆ 8-6 ರಲ್ಲಿ ಮುನ್ನಡೆ ಸಾಧಿಸಲು ನೆರವಾದರು. ಇದಾದ ಕೆಲವೇ ಕ್ಷಣಗಳಲ್ಲಿ ಬುಲ್ಸ್ ತಂಡವನ್ನು ಆಲೌಟ್ ಮಾಡಿದ ಸ್ಟೀಲರ್ಸ್ 12-6 ಅಂಕಗಳ ಮುನ್ನಡೆ ಸಾಧಿಸಿತು.
ಬುಲ್ಸ್ ಮೇಲೆ ನಿರಂತರ ಒತ್ತಡ ಹೇರಿದ ಸ್ಟೀಲರ್ಸ್, 11ನೇ ನಿಮಿಷದಲ್ಲಿ 15-7ರಲ್ಲಿ ಮೇಲುಗೈ ಸಾಧಿಸಿತು. 18ನೇ ನಿಮಿಷದಲ್ಲಿ ಸಿದ್ಧಾರ್ಥ್ ದೇಸಾಯಿ ಎರಡು ಅಂಕ ಗಳಿಸಿ ತಂಡಕ್ಕೆ ಮತ್ತಷ್ಟು ಮುನ್ನಡೆ ತಂದುಕೊಟ್ಟರು. ವಿರಾಮದ ವೇಳೆಗೆ ಸ್ಟೀಲರ್ಸ್ 26-13 ಅಂಕಗಳ ಮುನ್ನಡೆ ಕಂಡುಕೊಂಡಿತು.
ದ್ವಿತೀಯಾರ್ಧದ ಆರಂಭದಲ್ಲೇ ವಿನಯ್ ಅವರನ್ನು ಬುಲ್ಸ್ ಟ್ಯಾಕಲ್ ಮಾಡಿತು. ಆದರೆ 24ನೇ ನಿಮಿಷದಲ್ಲಿ ಹರಿಯಾಣ 29-15 ರಲ್ಲಿ ಆರಾಮದಾಯಕ ಮುನ್ನಡೆಯನ್ನು ಕಾಯ್ದುಕೊಂಡಿತು. 31ನೇ ನಿಮಿಷದಲ್ಲಿ ಹರಿಯಾಣ ತಂಡ ಆಲೌಟ್ ಗೆ ಗುರಿಯಾಯಿತಾದರೂ 31-24 ಅಂಕಗಳ ಅಂತರದಲ್ಲಿ ಮೇಲುಗೈ ಸಾಧಿಸಿತು. ಹರಿಯಾಣದ ಡಿಫೆಂಡರ್ಗಳಾದ ಸೌರಭ್ ನಂದಾಲ್ ಮತ್ತು ಪಾರ್ತೀಕ್ ಅವರ ಪ್ರಯತ್ನಗಳ ಮೂಲಕ ಆತಿಥೇಯ ಬುಲ್ಸ್ ಕಮ್ ಬ್ಯಾಕ್ ಮಾಡಲು ಪ್ರಯತ್ನಿಸಿತು, ಆದರೆ ಸ್ಟೀಲರ್ಸ್ ಸಹ ಅಂಕಗಳನ್ನು ಗಳಿಸುತ್ತಲೇ ಸಾಗಿತು. ಹರಿಯಾಣ ತಂಡವು ಅಂತಿಮವಾಗಿ ಪಂದ್ಯದ ವಿಜೇತರಾಗಿ ಮ್ಯಾಟ್ ನಿಂದ ಹೊರನಡೆಯಿತು.
ಭಾನುವಾರದ ಪಂದ್ಯಗಳು:
ಪಂದ್ಯ 1: ಬೆಂಗಾಲ್ ವಾರಿಯರ್ಸ್ V/s ತಮಿಳ್ ತಲೈವಾಸ್ - ರಾತ್ರಿ 8 ಗಂಟೆ
ಪಂದ್ಯ 2: ದಬಾಂಗ್ ಡೆಲ್ಲಿ V/s ಹರಿಯಾಣ ಸ್ಟೀಲರ್ಸ್ - ರಾತ್ರಿ 9 ಗಂಟೆ
ಇದನ್ನೂ ಓದಿ: 2 ಕೋಟಿಗೆ ಜಿಜಿ ಪಾಲಾದ ಅನ್‌ಕ್ಯಾಪ್ಡ್ ಕಾಶ್ವೀ ಗೌತಮ್: ಸಂಪೂರ್ಣ ಬಿಡ್ ವಿವರ ಇಲ್ಲಿದೆ