ನವದೆಹಲಿ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಎರಡು ವರ್ಷಗಳ ನಂತರ ಹಳೆ ವೈಭವವನ್ನು ಪಡೆಯಲಿದೆ. ಹೇಗೆ ಗೊತ್ತಾ..?, ಫೈನಲ್ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರೇಕ್ಷಕರು ನೇರವಾಗಿ ಆಟವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
2021-22ರ ಐಎಸ್‌ಎಲ್ ಕ್ರೀಡಾಕೂಟದ ಫೈನಲ್ ಪಂದ್ಯ ಮಾರ್ಚ್ 20ರಂದು ಗೋವಾದಲ್ಲಿ ನಡೆಯಲಿದೆ. ಕಳೆದ ನವೆಂಬರ್‌ನಲ್ಲಿ ಈ ಫುಟ್‌ಬಾಲ್ ಲೀಗ್ ಆರಂಭವಾಗಿದ್ದು, ಸುಮಾರು ನಾಲ್ಕು ತಿಂಗಳ ನಂತರ ಫೈನಲ್ ಪಂದ್ಯವು ಮಾರ್ಗಾವೊದ ಪಿಜೆಎನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಫುಟ್ಬಾಲ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಗೋವಾ ಸರ್ಕಾರ ಜನವರಿ 23ರಂದು ಕೊನೆಯದಾಗಿ ಕೋವಿಡ್ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಈ ಅಧಿಸೂಚನೆ ಪ್ರಕಾರ ಸಾರ್ವಜನಿಕ ಸಭೆಗಳನ್ನು ನಡೆಸುವಾಗ ಗರಿಷ್ಠ ಸಾಮರ್ಥ್ಯದ ಶೇಕಡಾ 50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಹೇಳಲಾಗಿದೆ.
ಇದನ್ನೂ ಓದಿ: INDvsSL T20I: ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ಕೆ, ದೀಪಕ್ ಹೂಡ ಪದಾರ್ಪಣೆ, ಬುಮ್ರಾ-ಜಡ್ಡು ಕಮ್ಬ್ಯಾಕ್
ಫೈನಲ್ ಪಂದ್ಯ ನಡೆಯುವ ಪಿಜೆಎನ್ ಕ್ರೀಡಾಂಗಣದಲ್ಲಿ ಗರಿಷ್ಟ 15 ಸಾವಿರ ಜನರಿಗೆ ಅವಕಾಶವಿದೆ. ಕೋವಿಡ್ ಮಾರ್ಗಸೂಚಿಗಳ ಕಾರಣದಿಂದಾಗಿ 9,500 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಒಂದು ವೇಳೆ ಅಷ್ಟರಲ್ಲಿ ರಾಜ್ಯ ಸರ್ಕಾರ ಕೋವಿಡ್ ನಿಯಮಗಳನ್ನು ಮತ್ತಷ್ಟು ಸಡಿಲಿಕೆ ಮಾಡಿದರೆ, ಇನ್ನೂ ಹೆಚ್ಚಿನ ಜನರು ಕ್ರೀಡಾಂಗಣದತ್ತ ಮುಖ ಮಾಡುವ ಸಾಧ್ಯತೆ ಇದೆ.
ಐಎಸ್‌ಎಲ್ ಸಂಘಟಕರಾದ ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್ (ಎಫ್‌ಎಸ್‌ಡಿಎಲ್) ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಮತ್ತಷ್ಟು ನಿಯಮಗಳನ್ನು ಮತ್ತು ಟಿಕೆಟಿಂಗ್ ಮಾರ್ಗಸೂಚಿಗಳನ್ನು ಹದಿನೈದು ದಿನಗಳೊಳಗೆ ನೀಡಲಿದೆ.