ಬ್ರಸೆಲ್ಸ್: ತಮ್ಮ ದೇಶದ ತಂಡ ಗೆದ್ದಾಗ ಬಹುಪರಾಕ್ ಹೇಳಿ ಮೆರೆಸುವ ಅಭಿಮಾನಿಗಳು, ಸೋತಾಗ ಅಸಂತುಷ್ಟತೆ ತೋರಿಸುವುದು ಸಹಜ. ಫಿಫಾ ವಿಶ್ವಕಪ್ನಲ್ಲಿ ನಿನ್ನೆ ರಾತ್ರಿ ಹಾಲಿ ಚಾಂಪಿಯನ್ ಫ್ರಾನ್ಸ್ ವಿರುದ್ಧ ಮೊರಾಕ್ಕೊ ಸೆಮಿಫೈನಲ್ ಸೋಲು ಅನುಭವಿಸಿದ್ದು, ಇದು ಆಫ್ರಿಕನ್ ಅಭಿಮಾನಿಗಳಿಗೆ ನೋವು ತಂದಿದೆ. ಉದ್ರಿಕ್ತ ಅಭಿಮಾನಿಗಳು ಬ್ರಸೆಲ್ಸ್ನಲ್ಲಿ ಪೊಲೀಸರ ಜೊತೆ ಕಿತ್ತಾಡಿ ದಾಂಧಲೆ ಎಬ್ಬಿಸಿದ್ದಾರೆ.
0-2 ಗೋಲುಗಳಿಂದ ಸೋತು ಫೈನಲ್ ತಲುಪುವಲ್ಲಿ ಮೊರಾಕ್ಕೊ ಫುಟ್ಬಾಲ್ ತಂಡ ವಿಫಲವಾದ ಕಾರಣ ರೊಚ್ಚಿಗೆದ್ದ 100 ಕ್ಕೂ ಅಧಿಕ ಅಭಿಮಾನಿಗಳು ಬ್ರಸೇಲ್ಸ್ನ ರಸ್ತೆಗಳಿಗೆ ಬಂದು ಗಲಾಟೆ ಆರಂಭಿಸಿದ್ದಾರೆ. ಇದನ್ನು ತಡೆಯಲು ಬಂದ ಪೊಲೀಸರ ಮೇಲೂ ಅಭಿಮಾನಿಗಳು ದಾಳಿ ನಡೆಸಿದ್ದಾರೆ.
ಸಂಭ್ರಮಿಸಲು ತಂದಿದ್ದ ಪಟಾಕಿಗಳನ್ನು ಖಾಕಿ ಪಡೆಯ ಮೇಲೆ ಬಿಸಾಡಿದ್ದಾರೆ. ಬಳಿಕ ಸಿಕ್ಕ ಸಿಕ್ಕ ವಸ್ತುಗಳಿಂದ ತೂರಾಟ ನಡೆಸಿದ್ದಾರೆ. ಇದನ್ನು ತಡೆಯಲು ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಸಿಡಿಸಿದ್ದಾರೆ. ಬಳಿಕ ಹಲವಾರು ಅಭಿಮಾನಿಗಳನ್ನು ಬಂಧಿಸಲಾಗಿದೆ. ಕೆಲ ಸಮಯದ ಬಳಿಕ ಎಲ್ಲರನ್ನು ಚದುರಿಸಿ ಶಾಂತಿ ಸ್ಥಾಪಿಸಲಾಯಿತು. ಘಟನೆಯಲ್ಲಿ ಯಾರಿಗೂ ಗಂಭೀರ ಗಾಯವಾಗಿಲ್ಲ ಎಂದು ತಿಳಿದುಬಂದಿದೆ.
2002 ರಲ್ಲಿ ಬ್ರೆಜಿಲ್ ನಂತರ ಸತತ ಎರಡನೇ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶಿಸಿದ ತಂಡ ಎಂಬ ದಾಖಲೆ ಬರೆದ ಫ್ರಾನ್ಸ್, ಮೊರಾಕ್ಕೊವನ್ನು ಸೆಮಿಫೈನಲ್ನಲ್ಲಿ ಸೋಲಿಸಿತು. ಡಿಸೆಂಬರ್ 18 ರಂದು ನಡೆಯುವ ಫೈನಲ್ ಕದನದಲ್ಲಿ ಅರ್ಜೆಂಟೀನಾವನ್ನು ಎದುರಿಸಲಿದೆ.
ಮೊರಾಕ್ಕೊ ಕೋಚ್ ಪ್ರತಿಕ್ರಿಯೆ: ಪಂದ್ಯದ ನಂತರ ಮಾತನಾಡಿದ ಮೊರಾಕ್ಕೊ ಕೋಚ್ ವಾಲಿದ್ ರೆಗ್ರಾಗುಯ್, ನನ್ನ ತಂಡ ಅದ್ಭುತ ಪ್ರದರ್ಶನ ನೀಡಿತು. ವಿಶ್ವಕಪ್ ಅಭಿಯಾನದುದ್ದಕ್ಕೂ ಹಲವು ದಾಖಲೆಗಳನ್ನು ಬರೆಯಿತು. ಸೆಮಿಫೈನಲ್ವರೆಗೂ ಒಂದೇ ಒಂದು ಗೋಲನ್ನು ಬಿಟ್ಟುಕೊಟ್ಟಿರಲಿಲ್ಲ. ಆದರೆ, ಸೆಮಿಫೈನಲ್ನಲ್ಲಿ ಅದೃಷ್ಟ ನಮ್ಮ ಪಾಲಿಗೆ ಇರಲಿಲ್ಲ. ಹೀಗಾಗಿ ಸೋಲು ಕಂಡಿದ್ದೇವೆ ಎಂದರು.
ಓದಿ: ಮೊರಾಕ್ಕೊ ಮೊದಲ ಫೈನಲ್ ಆಸೆಗೆ ತಣ್ಣೀರೆರಚಿದ ಫ್ರಾನ್ಸ್... 2-0 ಗೋಲುಗಳಿಂದ ಗೆದ್ದು ಫೈನಲ್ಗೆ ಎಂಟ್ರಿ