ಅಲ್ ಜನೌಬ್ (ಕತಾರ್): ಹಾಲಿ ಚಾಂಪಿಯನ್, ಬಲಾಢ್ಯ ಫ್ರಾನ್ಸ್ ತಂಡವು ಫಿಫಾ ವಿಶ್ವಕಪ್ 2022ರ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ 4-1 ಗೋಲುಗಳಿಂದ ಗೆದ್ದು ಪ್ರತಿಷ್ಟಿತ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಪಂದ್ಯದ ಮೊದಲ 9ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ಪರ ಕ್ರೇಗ್ ಗುಡ್ವಿನ್ ಮೊದಲ ಗೋಲು ಗಳಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು. ಇದಾದ ಬಳಿಕ ಆಕ್ರಮಣಕಾರಿ ಆಟಕ್ಕಿಳಿದ ಫ್ರಾನ್ಸ್ 27ನೇ ನಿಮಿಷದಲ್ಲಿ ಆಡ್ರಿಯನ್ ರಾಬಿಯೊಟ್ ಗೋಲು ಹೊಡೆದು ಎದುರಾಳಿ ತಂಡಕ್ಕೆ ಶಾಕ್ ಕೊಟ್ಟರು. 32ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸುವ ಮೂಲಕ ಆಲಿವರ್ ಗಿರೌಡ್ ಫ್ರಾನ್ಸ್ಗೆ ಮತ್ತಷ್ಟು ಮುನ್ನಡೆ ಕೊಟ್ಟರು.
ಈ ಮುನ್ನಡೆ ಆಸ್ಟ್ರೇಲಿಯಾ ಮೇಲೆ ಫ್ರಾನ್ಸ್ ಹಿಡಿತ ಸಾಧಿಸಲು ನೆರವಾಯಿತು. ಕೈಲಿಯನ್ ಎಂಬಪ್ಪೆ 68 ನೇ ನಿಮಿಷದಲ್ಲಿ ಹೊಡೆದ ಗೋಲು ಹಾಲಿ ಚಾಂಪಿಯನ್ನರಿಗೆ 3-1 ಮೇಲುಗೈ ನೀಡಿತು. ಗಿರೌಡ್ ಅವರು 71ನೇ ನಿಮಿಷದಲ್ಲಿ ತಮ್ಮ ಎರಡನೇ ಗೋಲು ದಾಖಲಿಸಿದಾಗ ಪಂದ್ಯ ಸಂಪೂರ್ಣ ಫ್ರಾನ್ಸ್ ಬಿಗಿಹಿಡಿತಕ್ಕೆ ಬಂದಿತ್ತು. ಈ ಮೂಲಕ ಫಿಫಾ ವಿಶ್ವಕಪ್‌ನಲ್ಲಿ ಹೊಸ ದಾಖಲೆ ಬರೆದ ಗಿರೌಡ್ 51 ಗೋಲುಗಳೊಂದಿಗೆ ದೇರ್ರಿ ಹೆನ್ರಿ ದಾಖಲೆ ಸರಿಗಟ್ಟಿದರು. ಆಸ್ಟ್ರೇಲಿಯಾ ಪರ ಕ್ರೇಗ್ ಗುಡ್ವಿನ್ ಏಕೈಕ ಗೋಲು ದಾಖಲಿಸಿದರು.
ಡೆನ್ಮಾರ್ಕ್ vs ಟ್ಯುನಿಷಿಯಾ ಪಂದ್ಯ ಡ್ರಾ: ಆಲ್ ರಯ್ಯಾನ್ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್ ಡಿ ನ ಎರಡು ತಂಡಗಳು ರೋಮಾಂಚನಕಾರಿಯಾಗಿ ಸೆಣಸಾಡಿ ಪಂದ್ಯವನ್ನು ಡ್ರಾ ಮಾಡಿಕೊಂಡವು. 2018 ರಲ್ಲಿ ವಿಶ್ವಕಪ್ ಕ್ವಾರ್ಟರ್‌ಫೈನಲ್ ತಲುಪಿದ ಡೆನ್ಮಾರ್ಕ್ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳ ಸಾಲಿನಲ್ಲಿದೆ. ಟ್ಯುನಿಷಿಯಾ ನೀಡಿದ ಸಾಂಘಿಕ ಪ್ರದರ್ಶನ ಪಂದ್ಯ ಡ್ರಾ ಮಾಡಿಕೊಳ್ಳಲು ನೆರವಾಯಿತು. ಇತ್ತಂಡಕ್ಕೂ ಗೋಲು ಗಳಿಸುವ ಅವಕಾಶ ಸಿಕ್ಕರೂ ಆಟಗಾರರು ಯಶಸ್ವಿಯಾಗಲಿಲ್ಲ.
ಮೆಕ್ಸಿಕೋ vs ಪೋಲೆಂಡ್ ಡ್ರಾ: ಇನ್ನು ಗ್ರೂಪ್ ಸಿ ಯಲ್ಲಿರುವ ಮೆಕ್ಸಿಕೋ ಮತ್ತು ಪೋಲೆಂಡ್ ಪಂದ್ಯವೂ ಯಾವುದೇ ಗೋಲು ದಾಖಲಾಗದೆ 0-0 ಯಿಂದ ಕೊನೆಗೊಂಡಿತು. ಪೋಲೆಂಡ್ ಪರ ನಾಯಕ ರಾಬರ್ಟ್ ಲೆವಾಂಡೋಸ್ಕಿಗೆ ಪೆನಾಲ್ಟಿ ಅವಕಾಶ ಪಡೆದರು. ಆದರೆ ಅವರು ಗೋಲು ಗಳಿಸುವಲ್ಲಿ ವಿಫಲರಾದರು. ಈ ಪ್ರಯತ್ನವನ್ನು ಮೆಕ್ಸಿಕೋ ಗೋಲ್ ಕೀಪರ್ ಗಿಲ್ಲೆರ್ಮೊ ಓಚೋವಾ ಅತ್ಯುತ್ತಮವಾಗಿ ತಡೆದರು. ಆದ್ರೆ ಪಂದ್ಯದುದ್ದಕ್ಕೂ ಎರಡು ದೇಶದ ತಂಡಗಳು ಗೋಲು ಗಳಿಸಲು ಸಮನಾದ ಹೋರಾಟ ನಡೆಸಿದವು.
ಇದನ್ನೂ ಓದಿ :ಫಿಫಾ ವಿಶ್ವಕಪ್: ಮೆಸ್ಸಿ ತಂಡಕ್ಕೆ ಸೌದಿ ಅರೇಬಿಯಾ ಶಾಕ್