ಸೋನಿಪತ್ : ಟೋಕಿಯೊ ಒಲಿಂಪಿಕ್ಸ್ನಲ್ಲಿ 65 ಕೆಜಿ ವಿಭಾಗದ ಕುಸ್ತಿಯಲ್ಲಿ ಸ್ಪರ್ಧಿಸಿದ್ದ ಭಾರತದ ಭರವಸೆಯ ಕುಸ್ತಿಪಟು ಬಜರಂಗ್ ಪೂನಿಯಾ ಗಾಯದ ಕಾರಣ ಸೆಮಿಫೈನಲ್ನಲ್ಲಿ ಸೋಲು ಕಂಡಿದ್ದರು. ಆದರೆ, ದೇಶಕ್ಕೆ ಪದಕ ತಂದುಕೊಡಬೇಕೆನ್ನುವ ಮನೋಭಾವದಿಂದ ಗಾಯ ಮರೆತು ಪದಕ ಗೆಲ್ಲುವತ್ತ ನನ್ನೆಲ್ಲಾ ಗಮನ ನೀಡಿದ್ದೆ ಎಂದು ಈಟಿವಿ ಭಾರತಕ್ಕೆ ಸ್ಟಾರ್ ಕುಸ್ತಿಪಟು ತಿಳಿಸಿದ್ದಾರೆ.
"ಇಂಜುರಿ ಕಾರಣದಿಂದ ನಾನು ಸೆಮಿಫೈನಲ್ನಲ್ಲಿ ಸೋಲು ಕಾಣಬೇಕಾಯಿತು. ಆದರೆ, ಕೊನೆಗೆ ಉಳಿದಿದ್ದು ಕಂಚಿನ ಪದಕದ ಪಂದ್ಯ ಮಾತ್ರ. ಅದಕ್ಕಾಗಿ ನನ್ನ ಸಂಪೂರ್ಣ ಗಮನ ನೀಡಿದೆ. ಇದೀಗ ಗಾಯದಿಂದ ಚೇತರಿಸಿಕೊಳ್ಳುವತ್ತಾ ಗಮನ ನೀಡುತ್ತೇನೆ. ಮುಂದಿನ ವಿಶ್ವ ಚಾಂಪಿಯನ್ಶಿಪ್ ಸೇರಿ ಮುಂಬರುವ ಟೂರ್ನಮೆಂಟ್ಗಳಲ್ಲಿ ಚಿನ್ನದ ಪದಕ ಗೆಲ್ಲಲು ಪ್ರಯತ್ನಿಸುತ್ತೇನೆ" ಎಂದು ಬಜರಂಗ್ ತಿಳಿಸಿದ್ದಾರೆ.
ಬಜರಂಗ್ ಪೂನಿಯಾ ಕಂಚಿನ ಪದಕ ಪಂದ್ಯದಲ್ಲಿ ಕಜಕಸ್ತಾನದ ದೌಲತ್ ನಿಯಜ್ಬೆಕೋವ್ ವಿರುದ್ಧ 8-0 ಅಂತರದಿಂದ ಗೆಲುವು ಸಾಧಿಸಿ ಕಂಚಿನ ಪದಕ ಗೆದ್ದಿದ್ದರು. ಮೊದಲಾರ್ಧದಲ್ಲಿ 2-0ಯಲ್ಲಿ ಮುನ್ನಡೆ ಸಾಧಿಸಿದ ಪೂನಿಯಾ ದ್ವಿತಿಯಾರ್ಧದಲ್ಲಿ ಕಜಕಸ್ತಾನದ ಕುಸ್ತಿಪಟುವಿನ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಭಾರತಕ್ಕೆ 6ನೇ ಪದಕ ತಂದುಕೊಟ್ಟರು. ಕೊನೆಯ ಮೂರು ನಿಮಿಷಗಳಲ್ಲಿ ಎದುರಾಳಿಯ ವಿರುದ್ಧ ಯಾವುದೇ ತಪ್ಪುಗಳನ್ನೆಸೆಯದ ಪೂನಿಯಾ 6 ಅಂಕ ಸಂಪಾದಿಸಿ ಪದಕ ಪಡೆದು ಇತಿಹಾಸ ನಿರ್ಮಿಸಿದ್ದರು.
ಚಿನ್ನದ ಪದಕದ ಆಸೆ ಗಾಯದಿಂದ ಕೈತಪ್ಪಿದರೂ ದೇಶಕ್ಕೆ ಕಂಚಿನ ಪದಕ ತಂದುಕೊಟ್ಟ ಬಜರಂಗ್ ಪೂನಿಯಾರನ್ನು ಸ್ಥಳೀಯರು ಮತ್ತು ಕುಟುಂಬಸ್ಥರು ಅದ್ದೂರಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಈಟಿವಿ ಭಾರತದ ಜೊತೆಗೆ ತಮ್ಮ ಗಾಯ ಮತ್ತು ತಮ್ಮ ಯೋಜನೆಗಳನ್ನು ಹಂಚಿಕೊಂಡಿದ್ದಾರೆ.
ಇದನ್ನು ಓದಿ : ಚಿನ್ನ ಗೆದ್ದ ನೀರಜ್ಗೆ 50 ಲಕ್ಷ, ಬಜರಂಗ್ಗೆ 10 ಲಕ್ಷ ಬಹುಮಾನ ಘೋಷಿಸಿದ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ