ಲಂಡನ್: ಐಪಿಎಲ್ನ ಫ್ರಾಂಚೈಸಿಗಳಿಗೆ 100 ಎಸೆತಗಳ ಹೊಸ ಮಾದರಿಯ ಲೀಗ್ ' ದಿ ಹಂಡ್ರೆಡ್'ನಲ್ಲಿ ಆಡುವ ತಂಡಗಳಲ್ಲಿ ಪಾಲುಗಳನ್ನು ನೀಡಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಸಿದ್ಧವಾಗಿದೆ ಎಂದು ವರದಿಯಾಗಿದೆ. ಈ ಟೂರ್ನಿ 2020ರಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್-19 ಕಾರಣ ಮುಂದೂಡಲ್ಪಟ್ಟಿತ್ತು.
ಇಂಗ್ಲೀಷ್ ಪತ್ರಿಕೆ ಟೆಲಿಗ್ರಾಫ್ ವರದಿಯ ಪ್ರಕಾರ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಭಾರತೀಯ ಆಟಗಾರರ ಸಂಖ್ಯೆಯ ಆಧಾರದ ಮೇಲೆ ಏಷ್ಯಾದ ದೂರದರ್ಶನ ಹಕ್ಕುಗಳಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಪಾಲು ನೀಡಲು ಇಸಿಬಿ ಚಿಂತಿಸುತ್ತಿದೆ ತಿಳಿದು ಬಂದಿದೆ.
ಈಗಾಗಲೇ ಇಸಿಬಿ ಅಧ್ಯಕ್ಷ ಇಯಾನ್ ವಾಟ್ಮೋರೆ ಮತ್ತು ಸಿಎಒ ಟಾಮ್ ಹ್ಯಾರಿಸನ್ ಅಹಮದಾಬಾದ್ನಲ್ಲಿ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ನಡೆಯುವ ವೇಳೆ ಈ ಕುರಿತು ಬಿಸಿಸಿಐ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಲ್ಲಿ ತಿಳಿದು ಬಂದಿದೆ.
ಇದನ್ನು ಓದಿ:ಇಂಗ್ಲೆಂಡ್ನ 'ದಿ ಹಂಡ್ರೆಡ್' ಟೂರ್ನಿಯಲ್ಲಿ ಮಹಿಳಾ ಮತ್ತು ಪುರುಷರ ವಿಜೇತ ತಂಡಕ್ಕೆ ಸಮಾನ ಬಹುಮಾನ
ಭಾರತೀಯ ಆಟಗಾರ್ತಿಯರು ಮಹಿಳಾ ಹಂಡ್ರೆಡ್ ಲೀಗ್ನಲ್ಲಿ ಆಡಲು ಲಭ್ಯವಾಗಲಿದ್ದು, ಮುಂದಿನ ವರ್ಷ ಪುರುಷರು ಭಾಗವಹಿಸಲು ದಾರಿ ಮಾಡಿಕೊಡಲಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಕುರಿತು ಭಾರತದ ಯಾವುದೇ ಆಟಗಾರರು ಇದುವರೆಗೆ ತಮ್ಮ ಅಭಿಪ್ರಾಯ ತಿಳಿಸಿಲ್ಲ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈಗಾಗೆಲೇ ಟಿ-20 ಇದೆ. ಹಾಗಾಗಿ 100 ಎಸೆತಗಳ ಟೂರ್ನಿ ಅಗತ್ಯವಿದೆಯೇ ಎಂದು ಕಳೆದ ವರ್ಷ ಹೇಳಿದ್ದರು.
ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಟೆಸ್ಟ್ ಸರಣಿ ಜುಲೈನಲ್ಲಿ ನಡೆಯಲಿದೆ. ಈ ಪ್ರವಾಸದ ವೇಳೆ ಬಿಸಿಸಿಐ ಮತ್ತು ಇಸಿಬಿ ಈ ಕುರಿತು ಮತ್ತೊಮ್ಮೆ ಮಾತುಕತೆ ನಡೆಸಲಿವೆ ಎಂದು ತಿಳಿದು ಬಂದಿದೆ.