ಟೋಕಿಯೋ: ಭಾನುವಾರ ಡಿಸ್ಕಸ್ ಥ್ರೋನಲ್ಲಿ ಸ್ಪರ್ಧಿಸಿ ಕಂಚು ಗೆದ್ದಿದ್ದ ವಿನೋದ್ ಕುಮಾರ್ ತಮ್ಮ ಪದಕವನ್ನು ಕಳೆದುಕೊಂಡಿದ್ದಾರೆ. ಅವರು ಎಫ್52ವಿಭಾಗದಲ್ಲಿ ಸ್ಪರ್ಧಿಸಲು ಅರ್ಹರಲ್ಲ ಎಂದು ಸಾಬೀತಾದ ನಂತರ ಸಂಘಟಕರು ವಿನೋದ್ ಕುಮಾರ್ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಿದ್ದಾರೆ.
41 ವರ್ಷದ ವಿನೋದ್ ಕುಮಾರ್ ಟೋಕಿಯೊ ಪ್ಯಾರಾಲಿಂಪಿಕ್ಸ್ 2020ರ ಡಿಸ್ಕಸ್ ಥ್ರೋನಲ್ಲಿ 19.91 ಮೀಟರ್ ಎಸೆದು ಭಾನುವಾರ ಕಂಚಿನ ಪದಕ ಪಡೆದಿದ್ದರು. ಪೋಲ್ಯಾಂಡ್ನ ಪಿಯೋಟರ್ ಕೊಸೆವಿಕ್ ಚಿನ್ನ ಮತ್ತು ಕ್ರೊವೇಷ್ಯಾದ ವೇಲಿಮಿರ್ ಸಂದೋರ್ ಬೆಳ್ಳಿ ಗೆದ್ದಿದ್ದರು. ಆದರೆ ಇತರ ಸ್ಪರ್ಧಿಗಳು ಈ ವರ್ಗದಲ್ಲಿ ವಿನೋದ್ ಕುಮಾರ್ ಸೇರ್ಪಡೆ ಕುರಿತು ಪ್ರಶ್ನಿಸಿ ಪ್ರತಿಭಟನೆ ನಡೆಸಿದ್ದರು. ಹಾಗಾಗಿ ಸ್ಪರ್ಧೆಯ ನಂತರ ಫಲಿತಾಂಶವನ್ನು ತಡೆಹಿಡಿಯಲಾಯಿತು. ಅಲ್ಲದೆ ಪದಕ ಸಮಾರಂಭವನ್ನು ಆಗಸ್ಟ್ 30 ರ ಸಂಜೆಯವರೆಗೆ ಮುಂದೂಡಲಾಗಿತ್ತು.
ಇದೀಗ ನಿಯಮದ ಪ್ರಕಾರ ವಿನೋದ್ ಎಫ್52ವಿಭಾಗದಲ್ಲಿ ಸ್ಪರ್ಧಿಸುವಂತಿಲ್ಲ. ಹೀಗಾಗಿ ಸಂಘಟಕರು ವಿನೋದ್ ಕುಮಾರ್ ಅವರನ್ನು ಅನರ್ಹಗೊಳಿಸಿದ್ದಾರೆ ಮತ್ತು ಅವರ ಫಲಿತಾಂಶವನ್ನು ರದ್ದುಗೊಳಿಸಲಾಗಿದೆ.
ಮಾಜಿ ಬಿಎಸ್ಎಫ್ ಯೋಧರಾಗಿದ್ದ ವಿನೋದ್ ಕುಮಾರ್ ದುರಾದೃಷ್ಟಕರ ಅಪಘಾತಕ್ಕೆ ಒಳಗಾಗಿದ್ದರು. ದೇಹದ ಕೆಲವು ಅಂಗ ಸ್ವಾಧೀನ ಕಳೆದುಕೊಂಡಿದ್ದರಿಂದ ದಶಕದ ಕಾಲ ಹಾಸಿಗೆಯಲ್ಲೇ ಕಾಲಕಳೆದಿದ್ದರು. ನಂತರ ಹಲವು ಸವಾಲುಗಳನ್ನು ಎದುರಿಸಿ ಪ್ಯಾರಾ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದರು.
ಭಾರತದ ಕ್ರೀಡಾಪಟು ವಿನೋದ್ ಕುಮಾರ್ ಅವರನ್ನು ಈ ಸ್ಪರ್ಧೆಯ ಕ್ರೀಡಾ ವರ್ಗದೊಂದಿಗೆ ನಿಯೋಜಿಸಲು ಪ್ಯಾನಲ್ಗೆ ಸಾಧ್ಯವಾಗಿಲ್ಲ. ಏಕೆಂದರೆ ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿಯಿಂದ ಕ್ರೀಡಾಪಟುವಿನ ವರ್ಗೀಕರಣ(ಸಿಎನ್ಸಿ) ಪೂರ್ಣಗೊಂಡಿಲ್ಲ ಎಂದು ತಿಳಿದುಬಂದಿದೆ. ಆದ್ದರಿಂದ ಅವರು ಪುರುಷರ F52 ಡಿಸ್ಕಸ್ ಥ್ರೋ ಪದಕ ಸ್ಪರ್ಧೆಗೆ ಅರ್ಹರಾಗಿಲ್ಲ. ಹಾಗಾಗಿ ಅವರ ಫಲಿತಾಂಶವನ್ನು ರದ್ದುಗೊಳಿಸಲಾಗಿದೆ ಎಂದು ಸಂಘಟಕರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.