ಅಲ್ಮಾಟಿ(ಕಜಕಸ್ತಾನ): ಡಿಫೆನ್ಸ್ನಲ್ಲಿ ಅದ್ಭುತ ಕೌಶಲ ತೋರಿದ ದೀಪಕ್ ಪೂನಿಯಾ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನ 86 ಕೆ.ಜಿ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ. ರವೀಂದರ್ (61ಕೆ.ಜಿ) ಮತ್ತು ಸಂಜೀತ್(92 ಕೆ.ಜಿ) ವಿಭಾಗದಲ್ಲಿ ಕಂಚಿಗಾಗಿ ಭಾನುವಾರ ಪೈಪೋಟಿ ನಡೆಸಲಿದ್ದಾರೆ.
ಈ ಹಿಂದೆ ಕಾಂಟಿನೆಂಟಲ್ ಚಾಂಪಿಯನ್ಶಿಪ್ನಲ್ಲಿ 2 ಕಂಚಿನ ಪದಕ ಗೆದ್ದಿರುವ 22 ವರ್ಷದ ಭರವಸೆಯ ಕುಸ್ತಿಪಟು ದೀಪಕ್, ಕೊರಿಯಾದ ಗ್ವಾನುಕ್ ಕಿಮ್ರನ್ನು ಸೆಮಿಫೈನಲ್ನಲ್ಲಿ 2-0 ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ. ಈಗಾಗಲೇ ವಿಶ್ವಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದಿರುವ ಪೂನಿಯಾ 2021ರ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ.
ಇನ್ನು, 61 ಕೆ.ಜಿ ವಿಭಾಗದ ಸೆಮಿಫೈನಲ್ನಲ್ಲಿ ರವೀಂದರ್ 4-7ರಲ್ಲಿ ಕಜಕಸ್ಥಾನದ ಆಡ್ಲಾನ್ ಆಕರೋವ್ ವಿರುದ್ಧ ಸೋಲು ಕಂಡರು. ಆದರೂ ಇವರು ಕಂಚಿನ ಪದಕಕ್ಕಾಗಿ ಕಿರ್ಗಿಸ್ತಾನ್‌ನ ಇಕ್ರೋಮ್ಜೋನ್ ವಿರುದ್ಧ ಭಾನುವಾರ ಕಾದಾಡಲಿದ್ದಾರೆ.
92 ಕೆ.ಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡ ಸಂಜೀತ್ ಕಂಚಿನ ಪದಕಕ್ಕಾಗಿ ಉಜ್ಬೇಕಿಸ್ತಾನದ ರುಸ್ತುಮ್ ಶೊಡೀವ್ ವಿರುದ್ಧ ಸ್ಪರ್ಧಿಸಲಿದ್ದಾರೆ.