ನವದೆಹಲಿ : ಟೋಕಿಯೋ ಒಲಿಂಪಿಯನ್ ಹಾಗೂ ಎರಡು ಬಾರಿಯ ಏಷ್ಯನ್ ಚಾಂಪಿಯನ್ ಪೂಜಾ ರಾಣಿ 5 ದಿನಗಳ ಅಂತರದಲ್ಲಿ ಸಹೋದರನ ವಿವಾಹದ ಸಂಭ್ರಮ ಮತ್ತು ತಂದೆಯ ಸಾವಿನ ಆಘಾತವನ್ನು ಅನುಭವಿಸಿದ್ದಾರೆ. ಆದರೂ ಬಲ್ಗೇರಿಯಾದ ಸೋಫಿಯಾದಲ್ಲಿ ಫೆಬ್ರವರಿ 8ರಿಂದ ಆರಂಭವಾಗಲಿರುವ ಸ್ಟ್ರಾಂಡ್ಜಾ ಮೆಮೊರಿಯಲ್ ಟೂರ್ನಮೆಂಟ್ ತಯಾರಿಗಾಗಿ ರಾಷ್ಟ್ರೀಯ ಚಾಂಪಿಯನ್ ತರಬೇತಿಗೆ ಮರಳಿದ್ದಾರೆ.
ತಾನು ರಾಷ್ಟ್ರೀಯ ಕ್ಯಾಂಪ್ಗೆ ನಿನ್ನೆ ಮರಳಿದ್ದೇನೆ ಎಂದು ಪಿಟಿಐಗೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರ ಧ್ವನಿ ನೋವಿನಿಂದ ಮತ್ತು ಅಸಹಾಯಕತೆಯಿಂದ ಕೂಡಿತ್ತು. 81 ಕೆಜಿ ವಿಭಾಗದಲ್ಲಿ ಪೂಜಾರಾಣಿ ಟೋಕಿಯೋ ಒಲಿಂಪಿಕ್ಸ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.
ಹರಿಯಾಣ ಪೊಲೀಸ್‌ನಲ್ಲಿ ನಿವೃತ್ತ ಇನ್ಸ್‌ಪೆಕ್ಟರ್ ಆಗಿದ್ದ ಆಕೆಯ ತಂದೆ ರಾಜ್‌ಬೀರ್ ಸಿಂಗ್ ಅವರ ಮರಣ ಬಾಕ್ಸರ್ಗೆ ದೊಡ್ಡ ಹೊಡೆತ ನೀಡಿದೆ. ಏಕೆಂದರೆ, ಅವರು ಬಾಕ್ಸರ್ ವೃತ್ತಿಜೀವನವನ್ನು ಪ್ರಾರಂಭಿಸಿದಾಗ ಸಾಕಷ್ಟು ಮಂದಿ ವಿರೋಧಿಸಿದರೂ ತಂದೆ ಅವರ ಬೆಂಬಲಕ್ಕೆ ನಿಂತಿದ್ದರು.
"ನನ್ನ ತಂದೆಯೇ ನನಗೆ ದೊಡ್ಡ ಸ್ಫೂರ್ತಿ. ನಾನು ಅವರಿಗೆ ತುಂಬಾ ಹತ್ತಿರವಾಗಿದ್ದೆ. ಕಳೆದ ತಿಂಗಳು ನನ್ನ ಸಹೋದರನ ಮದುವೆಯ ಐದು ದಿನಗಳ ನಂತರ ನಾನು ಶಿಬಿರಕ್ಕೆ ಹಿಂತಿರುಗಿದ್ದೆ. ಫೆಬ್ರವರಿ 1ರಂದು ಇದ್ದಕ್ಕಿದ್ದಂತೆ ಬೆಳಗ್ಗೆ 3 ಗಂಟೆಗೆ ಅವರು ಹೃದಯಾಘಾತದಿಂದ ನಿಧನರಾದರು ಎಂಬ ಸುದ್ದಿಯನ್ನು ನನಗೆ ತಿಳಿಸಲಾಯಿತು. ತಕ್ಷಣ ನಾನು ಮನೆಗೆ ಧಾವಿಸಿದೆ " ಎಂದು ಭಾವುಕತೆಯಿಂದ ತಿಳಿಸಿದರು.
ನಾನು ಗೆದ್ದರೂ, ಸೋತರೂ ಅವರು ನಾನು ಖುಷಿಯಾಗಿರುವಂತೆ ನೋಡಿಕೊಳ್ಳುತ್ತಿದ್ದರು. ನಾನು ಬಾಕ್ಸಿಂಗ್ ಆರಂಭಿಸಿದಾಗ ಮೊದಲು ಅವರು ವಿರೋಧಿಸಿದ್ದರು. ಆದರೆ, ನಂತರ ನನಗೆ ಅವರೇ ಪಿಲ್ಲರ್ ಆಗಿ ನಿಂತುಕೊಂಡಿದ್ದರು. ನನ್ನ ವಿಜಯ ಮತ್ತು ಬೇಸರದಲ್ಲಿ ಅವರು ಜೊತೆಯಾಗಿ ನಿಲ್ಲುತ್ತಿದ್ದರು.
ಇದೀಗ ಅವರು ನನ್ನ ಜೊತೆಯಿಲ್ಲ. ಆದರೆ, ಅವರು ಹೆಮ್ಮೆ ಪಡುವಂತೆ ಮಾಡಬಲ್ಲೆ. ಈ ಟೂರ್ನಮೆಂಟ್ಗೆ ಸೂಕ್ತ ತರಬೇತಿ ಪಡೆಯಲು ನನೆಗೆ ಹೆಚ್ಚಿನ ಕಾಲಾವಕಾಶ ಸಿಕ್ಕಿಲ್ಲ, ಆದರೂ ಸ್ಟ್ರಾಂಜಾದಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದೇನೆ ಎನ್ನುವ ಭರವಸೆಯಿದೆ" ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಟಿ-20 ವಿಶ್ವಕಪ್ 2022: ಬುಕ್ಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಇಂಡೋ - ಪಾಕ್ ಟಿಕೆಟ್ ಸೋಲ್ಡ್ ಔಟ್!