ನವದೆಹಲಿ: ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ಗೆ ಸಮೀಪಿಸುತ್ತಿದೆ. ಹೀಗಾಗಿ ಆಟಗಾರರಿಗೆ ಕೋವಿಡ್ ಲಸಿಕೆ ಅತ್ಯಗತ್ಯ ಎಂದು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕದಿಂದಾಗಿ ತರಬೇತಿ ಸೇರಿದಂತೆ ಆಟಗಾರರು ಎದುರಿಸುತ್ತಿರುವ ಸವಾಲುಗಳನ್ನು ಸುಶೀಲ್ ವಿವರಿಸಿದ್ದಾರೆ. "ನಾವು ಒಲಿಂಪಿಕ್ಸ್‌ಗೆ ತಯಾರಿ ನಡೆಸುತ್ತಿದ್ದೇವೆ. ಕ್ರೀಡಾಕೂಟ ಸಮೀಪಿಸುತ್ತಿದ್ದು, ಕೋವಿಡ್ -19 ಗೆ ಲಸಿಕೆ ಅಗತ್ಯ ಎಂದು ನಾನು ಭಾವಿಸುತ್ತೇನೆ. ನನ್ನ ತಂಡದ ಅನೇಕ ಆಟಗಾರರು ಸೋಂಕಿಗೆ ಒಳಗಾಗಿದ್ದಾರೆ. ಇದು ಆಟಗಾರರಿಗೆ ನಿಜವಾಗಿಯೂ ಕಠಿಣ ಪರಿಸ್ಥಿತಿಯಾಗಿದೆ. ಈಗಾಗಲೇ ತರಬೇತಿಯನ್ನು ಪ್ರಾರಂಭಿಸಲಾಗಿದ್ದು ಈ ವೇಳೆ ಕೂಡ ಅವರು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ. ಹೀಗಾಗಿ ಲಸಿಕೆ ಅತ್ಯಗತ್ಯ" ಎಂದು ಅವರು ಹೇಳಿದರು.
"ದಯವಿಟ್ಟು ಪ್ರತಿಯೊಬ್ಬ ನಾಗರೀಕರು ಮತ್ತು ಕ್ರೀಡಾಪಟುಗಳು ಎಲ್ಲಾ ಕೋವಿಡ್ ನಿಯಮಗಳನ್ನು ಅನುಸರಿಸಿ, ನಿಮ್ಮ ಆರೋಗ್ಯದ ಬಗ್ಗೆ ಸರಿಯಾದ ಕಾಳಜಿ ವಹಿಸಿ. ಏಕೆಂದರೆ ನೀವು ಒಲಿಂಪಿಕ್ಸ್‌ಗೆ ತಯಾರಿ ನಡೆಸುತ್ತಿದ್ದೀರಿ ಹೊರತು ಯಾವುದೇ ಸ್ಟೇಟ್ ಚಾಂಪಿಯನ್‌ಶಿಪ್‌ಗಾಗಿ ಅಲ್ಲ" ಎಂದು ಸುಶೀಲ್ ಮನವಿ ಮಾಡಿದ್ದಾರೆ.
"ಎಲ್ಲೆಡೆ ಅಪಾಯವಿದೆ, ಪ್ರತಿಯೊಬ್ಬರೂ ಅಪಾಯದಲ್ಲಿದ್ದಾರೆ. ನಮ್ಮ ಶಿಬಿರ ಎಲ್ಲಿ ನಡೆಯುತ್ತಿದೆಯೋ ಅಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ಇದು ಸಹ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ನೀವೇ ನಿಮ್ಮ ಬಗ್ಗೆ ಕಾಳಜಿ ವಹಿಸಿಬೇಕು, ಲಸಿಕೆಗಾಗಿ ಕಾಯಬೇಕು" ಎಂದು ಕುಸ್ತಿಪಟು ಎಚ್ಚರಿಸಿದ್ದಾರೆ.
ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟವನ್ನು ಕೊರೊನಾ ಮಾರ್ಗಸೂಚಿಗಳು, ಮುನ್ನೆಚ್ಚರಿಕಾ ಕ್ರಮಗಳೊಂದಿಗೆ 2021ರ ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಸುವುದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ತಿಳಿಸಿದೆ.