ನವದೆಹಲಿ : ಕೋವಿಡ್-19 ಪರಿಣಾಮ ಎದುರಿಸಲು ಪರಿಹಾರಗಳನ್ನು ಕಂಡುಕೊಳ್ಳಲು ಭಾರತದ ಪ್ರತಿನಿಧಿಗಳನ್ನು ಒಳಗೊಂಡ ಕಾಮನ್‌ವೆಲ್ತ್ ನಾಯಕರು ನಿರ್ಧರಿಸಿದ್ದಾರೆ.
ಸಾಂಕ್ರಾಮಿಕ ರೋಗದ ಪರಿಣಾಮಗಳನ್ನು ಎದುರಿಸಲು ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲು ಬುಧವಾರ ಕಾಮನ್‌ವೆಲ್ತ್ ಸದಸ್ಯ ರಾಷ್ಟ್ರಗಳ ವರ್ಚುವಲ್ ಸಭೆ ನಡೆಯಿತು. ಈ ವೇಳೆ, ಮಾತನಾಡಿದ ಕಾಮನ್‌ವೆಲ್ತ್ ಕಾರ್ಯದರ್ಶಿ , ಜಾಗತಿಕ ಆರೋಗ್ಯ ತುರ್ತು ಸ್ಥಿತಿ ಮತ್ತು ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳಿಂದಾಗಿ ಅನೇಕ ಸದಸ್ಯ ರಾಷ್ಟ್ರಗಳು ಬಹುದೊಡ್ಡ ಸವಾಲುಗಳನ್ನು ಎದುರಿಸುತ್ತಿವೆ ಎಂದು ತಿಳಿಸಿದರು.
ಕೋವಿಡ್ ಸಂದಿಗ್ದತೆಯೊಂದಿಗೆ ಹವಾಮಾನ ಬದಲಾವಣೆಯು ದೀರ್ಘ ಕಾಲದ ಸಮಸ್ಯೆಯಾಗಿ ಇದೆ. ಇದರ ಜೊತೆ ಚಂಡಮಾರುತ ಮತ್ತೊಂದು ಸವಾಲಾಗಿ ಸೇರಿಕೊಂಡಿವೆ. ಇದಕ್ಕೆ ತ್ವರಿತ ಮತ್ತು ಸಂಘಟಿತ ಕ್ರಮಕೈಗೊಳ್ಳದಿದ್ದರೆ ಬಿಕ್ಕಟ್ಟು ಎದುರಾಗಲಿದೆ. ಹೀಗಾಗಿ ಸೂಕ್ತ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.
ತಾಂತ್ರಿಕ ಸಾಧನಗಳು ಮತ್ತು ಆಯಾ ದೇಶದ ಆಡಳಿತಗಳು ಸವಾಲುಗಳನ್ನು ನಿರ್ವಹಿಸುವಲ್ಲಿ ಉತ್ತಮ ಪಾತ್ರ ವಹಿಸಿವೆ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು. ಕೋವಿಡ್ನಿಂದಾಗಿ ಆರ್ಥಿಕತೆಯ ಮೇಲೆ ಆಗುವ ಪರಿಣಾಮ ತಗ್ಗಿಸಲು, ವ್ಯಾಪಾರ ಮತ್ತು ಹಣಕಾಸು ಮೇಲಿನ ಸಹಕಾರವನ್ನು ವೇಗಗೊಳಿಸಲು ಮತ್ತು ಹವಾಮಾನ ಬದಲಾವಣೆಯ ದೀರ್ಘಕಾಲಿನ ಪರಿಣಾಮಗಳನ್ನು ನಿಭಾಯಿಸಲು ತುರ್ತು ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.